Advertisement

ನೌಕರಿ ನೆಪದಲ್ಲಿ ಅಪಹರಣ: ಕಾರಿನಲ್ಲಿ ಅರೆನಗ್ನಗೊಳಿಸಿ ಸುಲಿಗೆ; ದಂಪತಿ ಸಹಿತ ನಾಲ್ವರ ಸೆರೆ

04:17 PM Aug 01, 2022 | Team Udayavani |

ಬೆಂಗಳೂರು: ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ದಂಪತಿ ಮತ್ತು ಸಹೋದರರು ಸೇರಿ ನಾಲ್ವರು ಮಹಾಲಕ್ಷ್ಮೀ ಲೇಔಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಚಿಕ್ಕಗೊಲ್ಲರಹಟ್ಟಿ ನಿವಾಸಿಗಳ ರವಿ(27) ಮತ್ತು ಆತನ ಪತ್ನಿ ಮಂಗಳ(26) ಹಾಗೂ ಸೋದರ ಸಂಬಂಧಿಗಳಾದ ಶ್ರೀನಿವಾಸ್‌ (24), ಶಿವಕುಮಾರ್‌ (19) ಬಂಧಿತರು. ಆರೋಪಿಗಳಿಂದ 23 ಗ್ರಾಂ ಚಿನ್ನಾಭರಣ, 70 ಸಾವಿರ ರೂ. ನಗದು, ಕಾರು, ಮೊಬೈಲ್‌ಗಳು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.  ಆರೋಪಿಗಳು ಇತ್ತೀಚೆಗೆ ನಂದಿನಿ ಲೇಔಟ್‌ನ ಮಹಿಳೆಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ಅಪಹರಿಸಿ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ರವಿ ದಂಪತಿ ಉತ್ತರಹಳ್ಳಿಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಹೌಸ್‌ಕಿಪಿಂಗ್‌ ಕೆಲಸ ಮಾಡುತ್ತಿದ್ದರು. ಇಬ್ಬರು ಎರಡನೇ ಮದುವೆಯಾಗಿದ್ದು, ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಾಗಿದ್ದರು. ಶಿವಕುಮಾರ್‌, ಶ್ರೀನಿವಾಸ್‌ ಚಾಮರಾಜಪೇಟೆಯ ಗ್ಯಾಸ್‌ ಏಜೆನ್ಸಿಯಲ್ಲಿ ಸಿಲಿಂಡರ್‌ ಡೆಲಿವರಿ ಬಾಯ್‌ ಆಗಿದ್ದರು. ಈ ಪೈಕಿ ಶಿವಕುಮಾರ್‌ ರವಿ ದಂಪತಿ ಮನೆಯಲ್ಲಿ ವಾಸವಾಗಿದ್ದ.

ಇದನ್ನೂ ಓದಿ:  ವರ್ಕ್‌ ಫ್ರಂ ಹೋಮ್‌: ನಿದ್ರೆಗೂ ಟೈಮಿಲ್ಲ

ವಿಚ್ಛೇದಿತ, ವಿಧವೆಯರೇ ಟಾರ್ಗೆಟ್‌: ಆರೋಪಿ ಮಂಗಳ ಈ ಹಿಂದೆ ನಗರದ ವಿವಿಧೆಡೆ ಬೇರೆ ಬೇರೆ ಕೆಲಸ ಮಾಡುವಾಗ ಹಲವಾರು ಮಂದಿಯನ್ನು ಪರಿಚಯಿಸಿಕೊಂಡಿದ್ದಳು. ಅವರ ಸಂಪರ್ಕದಿಂದಲೇ ವಿಚ್ಛೇದಿತ ಮತ್ತು ವಿಧವೆಯರು ಸೇರಿ ಮಹಿಳೆಯರಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಪ್ರಚಾರ ಮಾಡಿಕೊಂಡಿದ್ದಳು. ಹೀಗಾಗಿ, ಈಕೆಯನ್ನು ಹಲವಾರು ಮಂದಿ ಸಂಪರ್ಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಲವರಿಗೆ ಕೆಲಸ ಕೊಡಿಸಿದ್ದಾಳೆ. ಅವರ ಮೂಲಕ ಕೆಲ ಮಹಿಳೆಯರ ಮೊಬೈಲ್‌ ನಂಬರ್‌ ಪಡೆದು, ಈಕೆಯೇ ಸಂಪರ್ಕಿಸಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಸುಲಿಗೆ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.

Advertisement

ಅಪಹರಿಸಿ ಸುಲಿಗೆ: ಮಹಿಳೆಯರ ಬೇಡಿಕೆಯಂತೆ ಮಂಗಳ ಕೆಲಸ ಕೊಡಿಸುತ್ತೇನೆ ಎಂದು ಸ್ಥಳವೊಂದಕ್ಕೆ ಕರೆಸಿಕೊಳ್ಳುತ್ತಿದ್ದಳು. ಬಳಿಕ ರವಿ ಕಾರಿನಲ್ಲಿ ಬಂದು ಆ ಮಹಿಳೆಯರನ್ನು ಕರೆದುಕೊಂಡು, ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನಲ್ಲಿ ಕೂರಿಸಿಕೊಂಡು ಕಾರು ಹತ್ತಿಕೊಳ್ಳುತ್ತಿದ್ದರು. ಬಳಿಕ ಮಾಗಡಿ ರಸ್ತೆ ಅಥವಾ ಕನಕಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊ ಯುತ್ತಿದ್ದರು. ಅದನ್ನು ಪ್ರಶ್ನಿಸಿದ ಮಹಿಳೆಯರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸುತ್ತಿದ್ದರು. ನಂತರ ಹಣ, ಚಿನ್ನಾಭರಣ ಹಾಗೂ ಬ್ಯಾಂಕ್‌ ಖಾತೆಯಲ್ಲಿದ್ದ ಹಣ ವನ್ನು ವರ್ಗಾವಣೆ ಮಾಡಿಕೊಂಡು, ಮಾರಕಾಸ್ತ್ರ ತೋರಿಸಿ, ಅರೆನಗ್ನಗೊಳಿಸಿ ವಿಡಿಯೋ ಮಾಡುತ್ತಿದ್ದರು. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು

ಅರೆನಗ್ನ ವಿಡಿಯೋ, ಬ್ಲ್ಯಾಕ್‌ಮೇಲ್‌:

ಇತ್ತೀಚೆಗೆ ನಂದಿನಿ ಲೇಔಟ್‌ ಮಹಿಳೆಯನ್ನು ಸಂದೀಪ್‌ ಬಾರ್‌ ಬಳಿ ಕರೆಸಿಕೊಂಡ ಮಂಗಳ, ಮೂವರು ಆರೋಪಿಗಳ ಜತೆ ಕಾರಿನಲ್ಲಿ ಕಳುಹಿಸಿದ್ದಳು. ಮಾರ್ಗ ಮಧ್ಯೆ ಅನುಮಾನಗೊಂಡು ಕಾರು ನಿಲ್ಲಿಸುವಂತೆ ಸಂತ್ರಸ್ತೆ ಕೂಗಿಕೊಂಡಾಗ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಬಳಿಕ ತಾವರೆಕೆರೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಕಾಸ್ತ್ರ ತೋರಿಸಿ ಅರೆನಗ್ನಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ 27 ಗ್ರಾಂ ಚಿನ್ನಾಭರಣ, 84 ಸಾವಿರ ರೂ. ಫೋನ್‌ ಪೇ ಮೂಲಕ ವರ್ಗಾವಣೆ, ಬಳಿಕ ಪಿನ್‌ ನಂಬರ್‌ ಪಡೆದು ಎಟಿಎಂ ಕೇಂದ್ರದಲ್ಲಿ 40 ಸಾವಿರ ರೂ. ಪಡೆದುಕೊಂಡಿದ್ದಾರೆ. ಬಳಿಕ ಮೊಬೈಲ್‌ ಕಸಿದುಕೊಂಡು ಮಾರ್ಗಮಧ್ಯೆ ಬಿಟ್ಟು ಹೋಗಿದ್ದರು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಂ.ಕಾಂತರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next