Advertisement
ಪಾಲುಬೀಳಲು ಅವಕಾಶಇದೀಗ ಬೇಸಗೆ ತಟ್ಟಿದ್ದು, ನಗರದ ಮಧ್ಯಭಾಗದಲ್ಲಿಯೇ ಇರುವ ಪ್ರಮುಖ ಕೆರೆಯಾದ ಸಿಗಡಿಕೆರೆ ಮತ್ತೂ ಒಳಗಿಹೋಗಿ ಬರೀ ಒಣಗಿದ ಗೆದ್ದೆಯಂತೆ ಕಾಣುತ್ತಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ ಕೆರೆಯನ್ನು ಸಂರಕ್ಷಿಸದೇ ಇನ್ನೂ ಪಾಲುಬೀಳಲು ಅವಕಾಶ ಕೊಟ್ಟು ತೆಪ್ಪಗಿರುವ ನೀರಾವರಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದಾಗಿ ಇದೀಗ ಕೆರೆಗೆ ಅತ್ತ ನೀರಿಲ್ಲದೇ, ಇತ್ತ ಯಾವ ಆರೈಕೆಯೂ ಇಲ್ಲದೇ ಬರಡು ಗದ್ದೆಯಂತಾಗುವ ನಿರ್ಭಾಗ್ಯ ಲಭಿಸಿದೆ.
ಸಿಗಡಿಕೆರೆಯು ಆನೆಕೆರೆಯ ಇನ್ನೊಂದು ಭಾಗದಲ್ಲಿದೆ. ಸುತ್ತಲೂ ಅಂತರ್ಜಲ ಮಟ್ಟ ಹೆಚ್ಚಳವಾಗಿಸುವಲ್ಲಿ ಆನೆಕೆರೆಯಂತೆ ಸಿಗಡಿಕೆರೆಯ ಪಾತ್ರವೂ ಕೂಡ ಅಷ್ಟೇ ಮಹತ್ವದ್ದು. ಮುಖ್ಯವಾಗಿ ಈ ಪ್ರದೇಶಗಳಲ್ಲಿ ನೀರಿನ ಒರತೆ ಹೆಚ್ಚು. ಹಾಗಾಗಿ ನೀರಿಗೆ ಹೆಚ್ಚಿನ ಕೊರತೆ ಈ ಭಾಗದಲ್ಲಿ ಕಾಡುವುದಿಲ್ಲ. ಭೈರವರಸರ ಕಾಲದಿಂದಲೂ ಇಡೀ ನಗರದ ಅಂದ ಚೆಂದ ಹೆಚ್ಚಿಸಿ ಪ್ರಾಚೀನ ಕೆರೆಯಾಗಿ ಗುರುತಿಸಿಕೊಂಡಿರುವ ಈ ಸಿಗಡಿಕೆರೆ ಅಪರೂಪದ ವಲಸೆ ಹಕ್ಕಿಗಳ, ವೈಶಿಷ್ಟÂ ಪೂರ್ಣ ಬಾತುಗಳ ಆಡೊಂಬೊಲ. ಸುತ್ತಲಿನ ಅಂತರ್ಜಲ ಮಟ್ಟದ ಏರಿಕೆಯಲ್ಲಿಯೂ ಮಹತ್ವದ ಪಾತ್ರ ವಹಿಸುವ ಈ ಕೆರೆಯನ್ನು ಯಾವ ಮಾಲಿನ್ಯವೂ ಇಲ್ಲದೇ ನಿರ್ವಹಿಸುವ ಕೆಲಸ ಮಾತ್ರ ಯಾರಿಂದಲೂ ಆಗುತ್ತಿಲ್ಲ. ಇದೀಗ ಬೇಸಗೆಗೆ ಒಣಗಿ ಬರೀ ಗದ್ದೆಯಂತೆ ಕಾಣುವ ಈ ಕೆರೆಯನ್ನು ನೋಡಿ ಚಿಂತಾಕ್ರಾಂತರಾಗುವ ಸರದಿ ಮಾತ್ರ ಕಾರ್ಕಳ ಪರಿಸರ ಪ್ರೇಮಿಗಳದ್ದು. ಈ ಹಿಂದೆ ಕಾರ್ಕಳ ರೋಟರಿ ಸಂಸ್ಥೆ ಈ ಕೆರೆಯನ್ನು ಅಭಿವೃದ್ಧಿ ಪಡಿಸಲು ಕೆಲ ನೀರಾವರಿ ಯೋಜನೆಗಳನ್ನು ಹಮ್ಮಿಕೊಂಡು ಕೆರೆಯ ಅಭಿವೃದ್ಧಿಗೆ ಪೂರಕವಾಗುವ ಕೆಲಸಗಳನ್ನು ಮಾಡಿತ್ತು.ಆದರೆ ಆ ಪ್ರಾಜೆಕ್ಟ್ ಸ್ಥಳೀಯಾಡಳಿತದ ಅಸಹಕಾರದಿಂದಾಗಿ ಫಲಪ್ರದವಾಗದೇ ಉಳಿದು ಹೋಯಿತು. ಡಂಪಿಂಗ್ ಯಾರ್ಡ್
ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಿಗಡಿ ಕೆರೆ, ಆನೆಕೆರೆ ಅಭಿವೃದ್ದಿಯ ಕುರಿತು ಪ್ರನಾಳಿಕೆಯನ್ನು ಪುಟಗಟ್ಟಲೇ ಬರೆದವೇ ಹೊರತು ಇಲ್ಲಿ ನಯಾಪೈಸೆ ಅಭಿವೃದ್ಧಿಯಾಗಲಿಲ್ಲ. ಬದಲಾಗಿ ಮಾಲಿನ್ಯಗಳು ಜಾಸ್ತಿ ಯಾಯಿತು, ಸುತ್ತಲಿನ ಅಂಗಡಿಗಳಿಗೆ ಬರುವ ಗಿರಾಕಿಗಳು, ಸ್ಥಳೀಯರು ಇದೇ ಒಂದು ಡಂಪಿಂಗ್ ಯಾರ್ಡ್ ಮಾಡಿ ಕಸಗಳನ್ನು ಇಲ್ಲೇ ಎಸೆದು ಸಿಗಡಿ ಕೆರೆಯನ್ನು ರಾಡಿ ಮಾಡಿಬಿಟ್ಟರು. ನೀರಿನ ಒರತೆಯಿಂದ ಉಕ್ಕುತ್ತಿದ್ದ ಸಿಗಡಿ ಕೆರೆ ಕೆಲವೇ ದಿನಗಳಲ್ಲಿ ರಾಡಿ ಕೆರೆಯಾಯಿತು. ಹೂಳೇ ತುಂಬಿದ ಕೊಂಪೆಯಾಯಿತು.
Related Articles
ಮುಖ್ಯವಾಗಿ ಜಲದಿನಾಚರಣೆ ಯಂದು ನೀರಿನ ಕುರಿತು ಮಾತನಾಡು ವವರಿಗೆ ಈ ಕೆರೆ ಕಾಣಿಸುತ್ತಿಲ್ಲ. ಅಲ್ಲದೇ ಈ ಕುರಿತು ಸಣ್ಣ ನೀರಾವರಿ ಇಲಾಖೆಯತ್ತ ಕೇಳಿದರೆ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಉತ್ತರ ಬರುತ್ತದೆ. ಅಲ್ಲದೇ ಕೆರೆಯ ಬಗ್ಗೆ ಯಾವ ಮಾಹಿತಿಯೂ ಇಲಾಖೆಗೆ ಗೊತ್ತಿಲ್ಲ.ಇಂತಹ ಇಲಾಖೆಗೆ ಈ ಕೆರೆ ಕಾಣಿಸುವುದು ಯಾವಾಗ? ಇದರ ಅಭಿವೃದ್ಧಿ ಆಗುವುದು ಯಾವಾಗ? ಪುರಸಭೆ ವ್ಯಾಪ್ತಿಯಲ್ಲಿದೆ ಎಂದು ಪುರಸಭೆಯ ಬಳಿ ಮಾಹಿತಿ ಕೇಳಿದರೂ ಪುರಸಭೆಗೂ ಈ ಕೆರೆಯ ಕುರಿತು ಕಾಳಜಿ ಇಲ್ಲ ಮಾಹಿತಿಯಂತೂ ಮೊದಲೇ ಇಲ್ಲ.
Advertisement
ಯಾವ ಇಲಾಖೆಗೆ…?ಕೆರೆಯೇ ಯಾವ ಇಲಾಖೆಗೆ ಸೇರುತ್ತದೆ ಅನ್ನುವುದೇ ಗೊಂದಲಗಳಿರುವಾಗ ಇನ್ನು ಕೆರೆಯನ್ನು ಅಭಿವೃದ್ಧಿ ಪಡಿಸುವವರು ಯಾರು? ಈ ಕೆರೆಯನ್ನು ಅಭಿವೃದ್ದಿಪಡಿಸಿದರೆ ನೈಸರ್ಗಿಕವಾಗಿ ಇದನ್ನು ಆಕರ್ಷಣೀಯ ತಾಣವನ್ನಾಗಿ ರೂಪಿಸಬಹುದು. ನೀರಿನ ಮೂಲವನ್ನೂ ಸಂರಕ್ಷಿಸಬಹುದು, ನಿಜವಾದ ನಿರ್ವಹಣೆಯೇ ಆದರೆ ಬೇಸಗೆಯಲ್ಲಿ ಸುತ್ತಲೂ ನೀರಿನ ಅಭಾವವೇ ಆಗಲಿಕ್ಕಿಲ್ಲ ಎನ್ನುವುದು ಇನ್ನಾದರೂ ಸಂಬಂಧಪಟ್ಟವರ ತಲೆಗೆ ಹೋಗಲಿ. ಈ ಕೆರೆಯ ಬಗ್ಗೆ ಸಂಬಂಧಪಟ್ಟವರು ಕಣ್ಣು ಹಾಯಿಸಲಿ. ತಾಲೂಕಿನಲ್ಲಿರುವ 180 ಕೆರೆಗಳಲ್ಲಿ ಕೆಲ ಕೆರೆಗಳು ಮಾತ್ರ ಸಮರ್ಪಕವಾಗಿದೆ. ಬಹುತೇಕ ಕೆರೆಗಳನ್ನು ಅಳೆದು ಆ ಕೆರೆಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿ ಅದರ ನಿರ್ವಹಣೆಯನ್ನು ಆ ಇಲಾಖೆಗೇ ವಹಿಸುವ ಪ್ರಕ್ರಿಯೆ ಇದೀಗ ಚಾಲ್ತಿಯಲ್ಲಿದೆ.ಸಿಗಡಿ ಕೆರೆಯನ್ನು ಆದಷ್ಟು ಶೀಘ್ರವೇ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗುವುದು.
– ಟಿ.ಜಿ.ಗುರುಪ್ರಸಾದ್, ಕಾರ್ಕಳ ತಹಶೀಲ್ದಾರ್ – ಪ್ರಸಾದ್ ಶೆಣೈ ಕಾರ್ಕಳ