ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಏಕೈಕ ಹಿಂದೂ ರಾಜಕೀಯ ಪಕ್ಷದ ಸ್ಥಾಪಕ ಸದಸ್ಯ ಮತ್ತು ರಾಷ್ಟ್ರೀಯ ನಾಯಕರಾಗಿರುವ ಜಯರಾಜ್ ಬಚು ಅವರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. 75 ವರ್ಷಪ್ರಾಯದ ಡರ್ಬಾನ್ ನಿವಾಸಿ ಬಚು ಅವರು ಒಂದು ವಾರದ ಅಂತರದಲ್ಲಿ ಕೋವಿಡ್‌ಗೆ ಬಲಿಯಾದರು ಎಂದು ಅವರ ಪುತ್ರ ಉಮೇಶ್ ಹೇಳಿದ್ದಾರೆ. ಅವರು ಪತ್ನಿ ರೇಣುಕಾ, ಮಕ್ಕಳಾದ ವಿನೋದ್, ಉಮೇಶ್, ರೇಶ್ಮಾ ಹರಿನಾರಾಯಣ್, ರಿಂಕು ಸಿಂಗ್ ಅವರನ್ನು ಅಗಲಿದ್ದಾರೆ.
ಇನ್‌ಫ್ಲ್ಯೂಯೆನಾನ್ಜ್ ಲೈಕ್ ಇಲ್‌ನೆಸ್‌ನಿಂದ ಬಳಲುತ್ತಿರುವ ತಂದೆಯನ್ನು ಚಿಕಿತ್ಸೆಗಾಗಿ ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಂದ ಕರೆಯಲ್ಲಿ ತಂದೆಯವರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಕುಟುಂಬದ ಇಬ್ಬರು ಸದಸ್ಯರು ಆಸ್ಪತ್ರೆಗೆ ಬರಬೇಕೆಂದು ಸೂಚಿಸಿದ್ದರು. ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ತಂದೆಯವರು ಮೃತಪಟ್ಟಿದ್ದರು ಎಂದು ಉಮೇಶ್ ತಿಳಿಸಿದರು.
ವೆಂಟಿಲೇಟರ್‌ನಲ್ಲಿ ಇಡುವಷ್ಟು ಅವರ ಆರೋಗ್ಯ ಹಾಳಾಗಿರಲಿಲ್ಲ. ಆದರೂ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯಲ್ಲಿ ಕೊನೆಯ ಬಾರಿಗೆ ಅವರನ್ನು ನೋಡಲು ಸಾಧ್ಯವಾಗಲಿಲ್ಲ ಎಂಬುದು ನನ್ನ ತಾಯಿ, ನನಗೆ ಮತ್ತು ನನ್ನ ಒಡಹುಟ್ಟಿದವರಿಗೆ ಅರಗಿಸಿಕೊಳ್ಳಲಾಗದ ನೋವು ಆಗಿದೆ ಎಂದವರು ವಿವರಿಸಿದ್ದಾರೆ.
ಬಚು ಅವರು ಕಳೆದ ಐದು ದಶಕಗಳಿಂದ ಸಮುದಾಯ ಮತ್ತು ರಾಜಕೀಯ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿಂದೂ ಸಮುದಾಯದ ಕಷ್ಟಗಳನ್ನು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಸರಕಾರಗಳಿಗೆ ಮನವರಿಕೆ ಮಾಡಿಕೊಳ್ಳಲು ಸಂಸ್ಥೆಯೊಂದರ ಅಗತ್ಯವಿದೆ. ಅದಕ್ಕಾಗಿ ಹಿಂದೂ ಏಕತಾ ನಡೆ (ಎಚ್‌ಯುಎಂ) ಯನ್ನು ಸ್ಥಾಪಿಸಲಾಗಿದೆ ಎಂದು ಬಚು ಹೇಳಿದ್ದರು.
ಜಯರಾಜ್ ಬಚು ಅವರ ಆಜೀವ ಸ್ನೇಹಿತ ರಾಮ್ ಮಹಾರಾಜ್ ಎಚ್‌ಯುಎಂನ ರಾಷ್ಟ್ರೀಯ ಚೇರ್ಮನ್ ಆಗಿದ್ದಾರೆ. ಅವರು ದಕ್ಷಿಣ ಆಫ್ರಿಕನ್ ಹಿಂದೂ ಧರ್ಮಸಭಾದ ಅಧ್ಯಕ್ಷರೂ ಆಗಿದ್ದಾರೆ.