Advertisement

ಬಾಸೆಲ್‌ ಮಿಶನ್‌ ಸಂಸ್ಥೆ ಆರಂಭಿಸಿದ ಮೂಲ್ಕಿ ಸ.ಕಿ.ಪ್ರಾ. ಶಾಲೆಗೀಗ 132 ವರ್ಷಗಳ ಸಂಭ್ರಮ

09:56 AM Nov 20, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1887 ಶಾಲೆ ಆರಂಭ
ಗಣ್ಯ ವ್ಯಕ್ತಿಗಳು ಈ ಶಾಲೆಯ ಹೆಮ್ಮಯ ವಿದ್ಯಾರ್ಥಿಗಳು.

ಮೂಲ್ಕಿ: ಶತಮಾನಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯ ವಾಣಿಜ್ಯ ಕೇಂದ್ರವಾಗಿ ಬೆಳೆದಿದ್ದ ಮೂಲ್ಕಿಯಲ್ಲಿ ಬಾಸೆಲ್‌ ಮಿಶೆನ್‌ ಸಂಸ್ಥೆಯಿಂದ ಮೂಲ್ಕಿ ಪೇಟೆಯ ಮಧ್ಯ ಭಾಗದಲ್ಲಿ 1887ರಲ್ಲಿ ಸರಕಾರಿ ಪ್ರಾಥಮಿಕ ಹಿರಿಯ ಶಾಲೆ (ಬೋರ್ಡ್‌ ಶಾಲೆ) ಆರಂಭಗೊಂಡಿತು. ಈ ಶಾಲೆಯೂ ಈಗ ಆರಂಭವಾಗಿ 132 ವರ್ಷ ಕಳೆದಿವೆೆ. ಮುಂದೆ ತಾಲೂಕು ಪಂಚಾಯತ್‌ ಅಧೀನಕ್ಕೆ ಒಳಪಟ್ಟ ಈ ಶಾಲೆಯನ್ನು ಸರಕಾರದಿಂದ ಅಭಿವೃದ್ಧಿಗೊಳಿಸಲಾಯಿತು.

ಅಂದಿನ ಕಾಲದಲ್ಲಿ 16 ಶಿಕ್ಷಕರಿದ್ದರು
ಆರಂಭದ ದಿನಗಳಲ್ಲಿ ಶಾಲೆಯನ್ನು ಬಾಸೆಲ್‌ ಮಿಶನ್‌ ಸಂಸ್ಥೆಯು ಮುನ್ನಡೆಸುತ್ತಿತ್ತು. ಅನಂತರ ಹತ್ತು ವರ್ಷಗಳ ಬಳಿಕ ಆಡಳಿತ ವ್ಯವಸ್ಥೆಯಲ್ಲಿ ಅಸಮಾಧಾನ ಉಂಟಾಗಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾದಾಗ ಸರಕಾರವೂ ತನ್ನ ಅಧೀನಕ್ಕೆ ಒಳಪಡಿಸಿಕೊಂಡಿತು. ಮುಂದೆ ತಾಲೂಕು ಪಂಚಾಯತ್‌ ಅಧೀನಕ್ಕೆ ಒಳಪಟ್ಟ ಈ ಶಾಲೆಯನ್ನು ಸರಕಾರದಿಂದ ಅಭಿವೃದ್ಧಿಗೊಳಿಸಲಾಯಿತು. ಸುಮಾರು 600ಕ್ಕೂ ಮಿಕ್ಕೂ ಮೂಲ್ಕಿ ಪರಿಸರದ ವಿವಿಧ ಗ್ರಾಮಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಿದ್ದರು. ಆಗ 16 ಶಿಕ್ಷಕರಿದ್ದರು.ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ಹಲವಾರು ಗಣ್ಯರು ಶಾಲೆಯ ಬೆಳವಣಿಗೆಗೆ ಸಹಾಯಮಾಡುವ ಮೂಲಕ ಬೋರ್ಡ್‌ ಶಾಲೆಗೆ ಪಲಿಮಾರು, ಕರ್ನಿರೆ, ಪಡುಬಿದ್ರಿ, ಹೆಜಮಾಡಿ, ಕಿನ್ನಿಗೋಳಿ, ಹಳೆಯಂಗಡಿ ಮತ್ತು ಪುನರೂರು ಮುಂತಾದ ವ್ಯಾಪ್ತಿಯ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಈ ಶಾಲೆಗೆ ಬರುತ್ತಿದ್ದರು.

ಈ ಶಾಲೆಯಲ್ಲಿ ಕಾರ್ನಾಡು ಸದಾಶಿವರಾಯರು, ಮಾಜಿ ಸಚಿವರಾದ ಡಾ| ದಾಮೋದರ ಮೂಲ್ಕಿ, ಮನೋರಮಾ ಮಧ್ವರಾಜ್‌, ಅಲ್ಲದೆ ಮೂಲ್ಕಿಯಲ್ಲಿ ಅಂದು ನೆಲೆಸಿªದ್ದ ಹಲವಾರು ಗಣ್ಯ ವ್ಯಕ್ತಿಗಳು ಈ ಶಾಲೆಯ ಹೆಮ್ಮಯ ವಿದ್ಯಾರ್ಥಿಗಳು.

Advertisement

ಸದ್ಯ ಈ ಶಾಲೆಯಲ್ಲಿ ಓರ್ವ ಮುಖ್ಯ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 52 ಮಕ್ಕಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಸ್ಥಳೀಯ ಗಣ್ಯರು ಮತ್ತು ಹಳೆವಿದ್ಯಾರ್ಥಿಗಳು ಶಾಲೆಯನ್ನು ಉಳಿಸಲು ಶಿಕ್ಷಕರ ನೇಮಕಕ್ಕಾಗಿ ಸರಕಾರದ ಗಮನಕ್ಕೆ ತರುತ್ತಿದ್ದಾರೆ.

ಸುಸಜ್ಜಿತ ಸೌಲಭ್ಯಗಳು
ಶಾಲೆಯಲ್ಲಿ ಸುಸ್ಸಜಿತವಾದ ಮೂಲಸೌಲಭ್ಯಗಳಿವೆ. ಆಟದ ಮೈದಾನ, ಶೌಚಾಲಯ, ತರಗತಿ ಕೋಣೆಗಳು, ಕುಡಿಯುವ ನೀರಿನ ಬಾವಿ, ಅಕ್ಷರ ದಾಸೋಹದ ಕೋಣೆ ಇವೆಲ್ಲವೂ ಊರಿನ ಜನರು ಮತ್ತು ಸರಕಾರದ ಅನುದಾನದಿಂದ ನಿರ್ಮಾಣವಾಗಿವೆ. ಪೂರ್ವದಲ್ಲಿ ಇಲ್ಲಿಯ ಗಣ್ಯ ವ್ಯಕ್ತಿಗಳಾದ ಬಂಗ್ಲೆ ಸೀತಾರಾಮ ಕಾಮತರ ಮಾಲಕತ್ವದ ಮನೋರಮಾ 3- ಹಾಲ್‌ ಶಾಲೆಯಾಗಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮ ಪರಿಸರವಾಗಿತ್ತು. ಅನಂತರ ಇಲ್ಲಿ ಸರಕಾರದಿಂದ ಸಾಕಷ್ಟು ತರಗತಿಗಳ ನಿರ್ಮಾಣ ಕಾರ್ಯ ನಡೆಯಿತು. ಶಾಲೆಯನ್ನು ಹೊಸ ಕಟ್ಟಡಗಳಿಗೆ ಸ್ಥಳಾಂತರಿಸಿ ಮೂಲ್ಕಿಯ ಹೆಮ್ಮೆ ಶಾಲೆ ಬೋರ್ಡು ಶಾಲೆ ಎಂದೆ ಪ್ರಸಿದ್ದಿ ಆಯಿತು.

ಶಾಲೆಯ ಇತಿಹಾಸ ಮತ್ತು ಇಲ್ಲಿ ಓದಿನ ಹಿರಿಯರ ಹೆಸರು ಕೇಳುವಾಗ ನಾನು ಇಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಎಂದಾಗುತ್ತಿದೆ. ಊರಿನ ಗಣ್ಯರು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರ ಈ ಶಾಲೆಯ ಉಳಿವಿಗೆ ಕಾರಣವಾಗಿದೆ.
– ಸುಗಂಧಿ ಪೂಜಾರಿ, ಪ್ರಭಾರ ಮುಖ್ಯ ಶಿಕ್ಷಕಿ

ಈ ಶಾಲೆಯ ಶಿಕ್ಷಕರು ಗುಣ ಮಟ್ಟದ ಶಿಕ್ಷಣ ಕೊಡು ವುದಕ್ಕಾಗಿ ಜಿಲ್ಲೆಯಲ್ಲಿ ಪ್ರಸಿದ್ಧರು. ಈ ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ ಎನ್ನುವುದು ನನಗೆ ಹೆಮ್ಮೆಯಾಗುತ್ತಿದೆ.
-ಡಾ| ಬಿ.ಎಚ್‌. ಶ್ರೀಪತಿ ರಾವ್‌, ನಿವೃತ್ತ ಡೀನ್‌, ಪ್ರಾಂಶುಪಾಲರು ಯೇನಪೋಯ ಡೆಂಟಲ್‌ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next