ಬೆಂಗಳೂರು: ಹಿಂದಿನ ಕಾಲದಲ್ಲಿ ಪ್ರೇಮಿಗಳು ಪತ್ರದ ಮೂಲಕ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪ್ರೇಮಿಗಳು ಸ್ವಂತಿಕೆ ಬಳಸದೆ ಕೇವಲ ಫಾರ್ವರ್ಡ್ ಸಂದೇಶಗಳನ್ನು ಕಳಿಸುತ್ತಾರೆ ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಜ್ಜೀಪುರ ಪ್ರಕಾಶನದ, ರವಿ ಅಜ್ಜೀಪುರ ಅವರ “ಪ್ರೇಮಸೂತ್ರ’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ನಂತರ ಮಾತನಾಡಿದ ರವಿ ಬೆಳಗೆರೆ, “ಈಗಿನದ್ದು ಮೊಬೈಲ್‌ನಲ್ಲಿ ಆರಂಭವಾಗಿ ಅದರಲ್ಲೇ ಮುಗಿದು ಹೋಗುವ ಪ್ರೀತಿ. ಬೆಳಿಗ್ಗೆ ಎಸ್‌ಎಂಎಸ್ ಕಳಿಸುವ ಮೂಲಕ ಪ್ರೀತಿ ಆರಂಭವಾಗಿ, ಸಂಜೆ ವೇಳೆಗೆ ಆ ಪ್ರೀತಿ ಅಂತ್ಯವಾಗಿರುತ್ತದೆ. ಹಿಂದೆ ಪತ್ರದ ಮೂಲಕ ಪ್ರೀತಿ ಆರಂಭವಾಗುತ್ತಿತ್ತು.
ಪತ್ರದಲ್ಲಿ ಪ್ರೇಮಿಗಳು ತಮ್ಮ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಎಸ್‌ಎಂಎಸ್ ಮೂಲಕ ಪ್ರೇಮ ನಿವೇದನೆ ನಡೆಯುತ್ತದೆ. ಮೊಬೈಲ್ ಪ್ರೀತಿಯಲ್ಲಿ ಸ್ವಂತಿಕೆ ಇರುವುದಿಲ್ಲ. ಏಕೆಂದರೆ, ಪ್ರೇಮ ಸಂದೇಶಗಳು “ಫಾರ್ವಡ್’ ಸಂದೇಶಗಳಾಗಿರುತ್ತವೆ. ಏನೇ ಆಗಲಿ ಪ್ರೀತಿ ಮಾಡಲು ತಾಳ್ಮೆ ಇರಬೇಕು,” ಎಂದರು.
ಶ್ವಾಸ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾತನಾಡಿ, “ಪ್ರತಿಯೊಬ್ಬ ಮನುಷ್ಯ ಪ್ರೀತಿ ಬಯಸುತ್ತಾನೆ. ಅದನ್ನು ಸರಿಯಾದ ದಾರಿಯಲ್ಲಿ ಪಡೆದರೆ ಮಾತ್ರ ಜೀವನ ಸುಂದರವಾಗುತ್ತದೆ. ಪ್ರೀತಿಗೆ ಲೌಕಿಕ ಜೀವನದಲ್ಲಷ್ಟೇ ಅಲ್ಲದೆ ಅಲೌಕಿಕ ಜೀವನದಲ್ಲೂ ಅಸ್ತಿತ್ವ ಇದೆ. ಮೀರಾಬಾಯಿ ಹಾಗೂ ತುಳಸೀದಾಸರು ಒಂದು ಹಂತದಲ್ಲಿ ದೇವರನ್ನೇ ಪ್ರೀತಿಸಲು ಆರಂಭಿಸಿದ್ದರು,” ಎಂದು ಉದಾಹರಣೆ ಕೊಟ್ಟರು.
ಪುಸ್ತಕದ ಕುರಿತು ಮಾತನಾಡಿದ ಚಿತ್ರನಿರ್ದೇಶಕ ಶಶಾಂಕ್, “ಸಿನಿಮಾಗಳಲ್ಲಿ ತೋರಿಸುವ ಪ್ರೀತಿ ಕಾಲ್ಪನಿಕ. ಆದರೆ, ಪುಸ್ತಕಗಳಲ್ಲಿ ಕತೆಗಳ ಮೂಲಕ ಹೇಳುವ ಪ್ರೀತಿ ವಾಸ್ತವವಾಗಿರುತ್ತದೆ. ಪ್ರೇಮಸೂತ್ರ ಪುಸ್ತಕ ಪ್ರೀತಿಯ ನಿಜವಾದ ಮುಖ ತೋರಿಸುವ ಮೂಲಕ ಸತ್ಯವನ್ನು ಬಿಚ್ಚಿಡುತ್ತದೆ,” ಎಂದರು. ಲೇಖಕ ರವಿ ಅಜ್ಜೀಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.