ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತೆಯನ್ನು ದೇಶದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿ ಎಂದು ದೂಷಿಸುವವರು 42 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ದೇಶದಲ್ಲಿ ಹೇರಿದ್ಧ ಕರಾಳ ಹಾಗೂ ನೈಜ ತುರ್ತು ಪರಿಸ್ಥಿಯ ಬಗ್ಗೆ ಆತ್ಮಾವಲೋಕನ ನಡೆಸಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
1975ರಲ್ಲಿ ದೇಶದಲ್ಲಿ ಆಗಿನ ಕಾಂಗ್ರೆಸ್ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯ ವರ್ಷಾಚರಣೆ ಸಂದರ್ಭದಲ್ಲಿ ಮಾಡಿರುವ ಫೇಸ್ ಬುಕ್ ಪೋಸ್ಟ್‌ನಲ್ಲಿ ಜೇತ್ಲಿ ಈ ಮಾತುಗಳನ್ನು ಹೇಳಿದ್ದಾರೆ.
’42 ವರ್ಷಗಳ ದೇಶದಲ್ಲಿ ಅಂದಿನ ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿಯು ಪ್ರಜಾಸತ್ತೆಯ ಎಲ್ಲ ಸಂಸ್ಥೆಗಳ ಮೇಲೆ ಮಾಡಲಾಗಿದ್ದ ಗದಾ ಪ್ರಹಾರವಾಗಿತ್ತು. ಆ ತುರ್ತು ಪರಿಸ್ಥಿತಿಯು ದೇಶದಲ್ಲಿ ಒಬ್ಬ ವ್ಯಕ್ತಿಯ (ಪ್ರಧಾನಿ ಇಂದಿರಾ ಗಾಂಧಿ) ಸರ್ವಾಧಿಕಾರಿತ್ವವನ್ನು ಸ್ಥಾಪಿಸಿತ್ತು; ಪರಿಣಾಮವಾಗಿ ಜನರಲ್ಲಿ, ಸಮಾಜದಲ್ಲಿ ಅತೀವವಾದ ಭಯ ಮತ್ತು ಅಭದ್ರತೆಯನ್ನು ಸೃಷ್ಟಿಸಿತ್ತು.’
‘ತುರ್ತು ಪರಿಸ್ಥಿತಿ ಹೇರಿಕೆಗೆ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆ ಮುಂತಾದ ಕಾರಣಗಳನ್ನು ಅಂದು ನೀಡಲಾಗಿತ್ತು ಮತ್ತು ಅದು ಬಹಳ ಕ್ಷುಲ್ಲಕವಾಗಿತ್ತು. ನಿಜವಾದ ಕಾರಣವೇನೆಂದರೆ ಅಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನ ಮೂಲಕ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸಿತ್ತು’
‘ಸುಪ್ರೀಂ ಕೋರ್ಟ್ ಅದಕ್ಕೆ ತಾತ್ಕಾಲಿಕ ತಡೆಯಾಜ್ಞೆ ಯನ್ನಷ್ಟೇ ನೀಡಿತ್ತು. ಆದರೆ ಇಂದಿರಾಜೀ ಅವರು ಅಧಿಕಾರದಲ್ಲಿ ಮುಂದುವರಿಯಲು ಬಯಸಿದ್ದರಿಂದ ಅವರು ತುರ್ತು ಪರಿಸ್ಥಿತಿಯನ್ನು ಹೇರಿ ತನ್ನ ಅಧಿಕಾರವನ್ನು ಉಳಿಸಿಕೊಂಡರು’ ಎಂದು ಜೇತ್ಲಿ 42 ವರ್ಷಗಳ ಹಿಂದಿ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿದರು.