Advertisement
ಈ ಲೇಖನ ಸದ್ರಿ ವರ್ಷ ಅಂದರೆ, 2016-17 ವಿತ್ತ ವರ್ಷಕ್ಕೆ ಅನ್ವಯವಾಗುತ್ತದೆ. ಅದನ್ನು 2017-18 ಅಸೆಸೆ¾ಂಟ್ ವರ್ಷ ಎಂದೂ ಕರೆಯುತ್ತಾರೆ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ ಅದರ ಅನಂತರದ ವರ್ಷ ಅಸೆಸೆ¾ಂಟ್ ವರ್ಷವಾಗುತ್ತದೆ. ಹಲವರು ಈ ವ್ಯತ್ಯಾಸವನ್ನು ತಿಳಿಯದೆ ಯಾವ ಯಾವುದೋ ವರ್ಷಕ್ಕೆ ಯಾವ ಯಾವುದೋ ಕರಕಾನೂನನ್ನು ತಗಲು ಹಾಕಿಸಿಕೊಂಡು ಅನಾವಶ್ಯಕ ಟೆನ್ಶನ್ ಏರಿಸಿಕೊಳ್ಳುತ್ತಾರೆ. ಈಗ, ಮುಖ್ಯ ವಿಚಾರಕ್ಕೆ ಬರೋಣ.
Related Articles
Advertisement
ಹೆಚ್ಚುವರಿ ಲಾಭ (ಸೆಕ್ಷನ್ 80ಇಇ): 2016ರ ಬಜೆಟ್ಟಿನಲ್ಲಿ ಈ ವಿತ್ತ ವರ್ಷಕ್ಕೆ (2016-17) ಅನ್ವಯವಾಗುವಂತೆ ಬಡ್ಡಿ ಪಾವತಿಯ ಮೇಲೆ ಸಿಗುವ ವಿನಾಯಿತಿಯ ಮಿತಿಯನ್ನು ರೂ. 2 ಲಕ್ಷದಿಂದ ರೂ. 2.5 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಇದು ಎಲ್ಲ ಗೃಹ ಸಾಲಗಳಿಗೂ ಅನ್ವಯಿಸುವುದಿಲ್ಲ. ಷರತ್ತುಗಳು: 1. ಇದು ನಿಮ್ಮ ಮೊತ್ತಮೊದಲ ಮನೆಯಾಗಿರಬೇಕು 2. ಮನೆಯ ಒಟ್ಟು ಬೆಲೆ ರೂ. 50 ಲಕ್ಷದ ಒಳಗಿರಬೇಕು 3. ಗೃಹ ಸಾಲದ ಮೊತ್ತ ರೂ. 35 ಲಕ್ಷದ ಒಳಗಿರಬೇಕು. 4. ಮನೆ ಪೂರ್ತಿ ನಿರ್ಮಾಣವಾಗಿ ನಿಮ್ಮ ಕೈಗೆ (ಪೊಸೆಷನ್) ಬಂದಿರಬೇಕು. 5. ಗೃಹಸಾಲ ಒಂದು ವಿತ್ತೀಯ ಸಂಸ್ಥೆಯಿಂದ ಮಾತ್ರವೇ ತೆಗೆದುಕೊಂಡ¨ªಾಗಿರಬೇಕು. 6. ಸಾಲವನ್ನು 2016-17 ವಿತ್ತೀಯ ವರ್ಷದಲ್ಲಿ ಪಡೆದಿರಬೇಕು.
ಈ ಹೊಸ ನಿಯಮದಿಂದಾಗಿ, ಆದಾಯದಲ್ಲಿ ರೂ. 50,000ದಷ್ಟು ಹೆಚ್ಚುವರಿ ಕಡಿತದಿಂದಾಗಿ, ಅವರವರ ಆದಾಯದ ಸ್ಲಾಬ್ ಅನುಸಾರ ಆ 50,000ದ 10%, 20% ಅಥವಾ 30% ಕರವಿನಾಯಿತಿ ಲಭಿಸೀತು. ಅಂದರೆ ವಾರ್ಷಿಕ ರೂ. 5,000, 10,000 ಯಾ 15,000 ಹೆಚ್ಚುವರಿ ಉಳಿಕೆ.
ಜಂಟಿ ಸಾಲ: ಇದಕ್ಕಾಗಿ ಸ್ವಂತ ಕರಾರ್ಹ ಆದಾಯವಿರುವ ಪತಿ-ಪತ್ನಿಯರು ಜಂಟಿ ಹೆಸರಿನಲ್ಲಿ ಸಾಲ ಮಾಡಿದರೆ ಇಬ್ಬರಿಗೂ ಎರಡೆರಡು ಲಕ್ಷ, ಒಟ್ಟಿಗೆ ನಾಲ್ಕು ಲಕ್ಷದಷ್ಟು ಬಡ್ಡಿ ಪಾವತಿಯ ಮೇಲೆ ಕರವಿನಾಯಿತಿಯನ್ನು ವೈಯಕ್ತಿಕ ಆದಾಯದಲ್ಲಿ ಪಡಕೊಳ್ಳಬಹುದು. ಇದಕ್ಕೆ ಮನೆಯೂ ಜಂಟಿ ಹೆಸರಲ್ಲಿರಬೇಕು. ಇಬ್ಬರ ಪಾಲು 50%-50% (ಅಥವಾ ಸಂದರ್ಭಾನುಸಾರ ಬೇರಾವುದೇ ಅನುಪಾತ) ಎಂಬುದನ್ನು ಸರಿಯಾಗಿ ಟೈಟಲ್ ಡೀಡ್‌ನಲ್ಲಿ ದಾಖಲಿಸಿಕೊಳ್ಳಬೇಕು. ಆಮೇಲೆ ಬ್ಯಾಂಕ್ ಸಾಲವನ್ನು ಮತ್ತದರ ಮಾಸಿಕ ಪಾವತಿಯನ್ನೂ (ಇಎಂಐ) ಕೂಡ ಅದೇ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಇವೆಲ್ಲವನ್ನೂ ಬ್ಯಾಂಕಿನ ಅಧಿಕಾರಿಗಳೊಂದಿಗೂ ಚರ್ಚಿಸಬೇಕು. ಹಾಗೆ ಸರಿಯಾದ ಕಾಗದ ಪತ್ರಗಳನ್ನು ಅನುಸರಿಸಿದರೇನೇ ಇಬ್ಬರಿಗೂ ಅವರವರ ಪಾಲಿನ ಬಡ್ಡಿಯ ಮೇಲೆ ಕರವಿನಾಯಿತಿ ಲಭಿಸೀತು.
ಪ್ರೀ-ಇಎಂಐ: ಇದಿಷ್ಟು ವಾರ್ಷಿಕ ಬಡ್ಡಿಯ ಮಾತಾಯಿತು. ಬಡ್ಡಿಪಾವತಿಯ ಮೇಲಿನ ಈ ಕರಸೌಲಭ್ಯ ಮನೆ ಸಂಪೂರ್ಣವಾಗಿ ವಾಸ್ತವ್ಯ ಪತ್ರ ಪಡೆದು ಬ್ಯಾಂಕಿನಲ್ಲಿ ಇಎಂಐ ಆರಂಭವಾದ ಬಳಿಕವೇ ದೊರೆಯುತ್ತದೆ. ಆದರೆ ಮನೆ ಕಟ್ಟುತ್ತಿರುವಾಗಲೂ ಬ್ಯಾಂಕು ತಾನು ನೀಡಿದ ಸಾಲದ ಮೇಲೆ ಬಡ್ಡಿ ಹೇರುತ್ತದಲ್ಲವೇ? ಆಗ ಇಎಂಐ ಇರುವುದಿಲ್ಲ. ತಾತ್ಕಾಲಿಕ ಮಾಸಿಕ ಬಡ್ಡಿ ಪಾವತಿಸಬೇಕಾಗಿ ಬರುತ್ತದೆ. ಇಂತಹ ಇಎಂಐ-ಪೂರ್ವ ಬಡ್ಡಿ (ಪ್ರೀ-ಇಎಂಐ) ಯ ಮೇಲೆಯೂ ಕರವಿನಾಯಿತಿ ಇದೆ. ಅಂತಹ ಪ್ರೀ-ಇಎಂಐ ಮೊತ್ತವನ್ನು ಗೃಹ ನಿರ್ಮಾಣವಾಗಿ ಬಡ್ಡಿ ಕಟ್ಟಲು ಆರಂಭಿಸಿದ ಮೇಲೆ 5 ಸಮಾನ ವಾರ್ಷಿಕ ಕಂತುಗಳಾಗಿ (ಒಟ್ಟು ಬಾಕಿಯ 20% ಪ್ರತಿವರ್ಷ) ಕರವಿನಾಯಿತಿಯ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಆದರೆ, ಇದು ಮೇಲೆ ಹೇಳಿದ ರೂ. 2,00,000ದ ಮಿತಿಯೊಳಗೇ ಬರುತ್ತದೆ. ಅಷ್ಟರಮಟ್ಟಿಗೆ ಇಎಂಐ ಬಡ್ಡಿ ಇಲ್ಲದವರಿಗೆ ಮಾತ್ರ ಇದು 5 ವರ್ಷಗಳ ಮಟ್ಟಿಗೆ ಅನುಕೂಲವಾದೀತು.
ಅಸಲು: ಬಡ್ಡಿಯ ಮೇಲಲ್ಲದೆ ಸಾಲಪಾವತಿಯ ಅಸಲು (ಪ್ರಿನ್ಸಿಪಲ್) ಭಾಗದ ಮೇಲೂ ಸೆಕ್ಷನ್ 80ಸಿ ಅನ್ವಯ ರೂ. 1.5 ಲಕ್ಷದವರೆಗೆ ವಿನಾಯಿತಿ ಇದೆ (ಕಳೆದ ವಾರದ ಕಾಕು ಓದಿ). ಇಎಂಐ ಯಾವತ್ತೂ ಸಮಾನವಾಗಿದ್ದರೂ ಅದರೊಳಗಿನ ಅಸಲು ಮತ್ತು ಬಡ್ಡಿಯ ಭಾಗಗಳು ಒಂದೇ ಸಮ ಇರುವುದಿಲ್ಲ. ಬ್ಯಾಂಕಿನವರು ಈ ನಿಟ್ಟಿನಲ್ಲಿ ಅಸಲು ಮತ್ತು ಬಡ್ಡಿಯ ಪ್ರತ್ಯೇಕವಾಗಿ ನಮೂದಿಸಿ ವರ್ಷಾಂತ್ಯದಲ್ಲಿ ಆ ಬಗ್ಗೆ ಸ್ಪಷ್ಟವಾದ ಸರ್ಟಿಫಿಕೇಟ್ ನೀಡುತ್ತಾರೆ. ಈ ಸೆಕ್ಷನ್ 80 ಸಿ ವಿನಾಯಿತಿಯಲ್ಲಿ ಇನ್ಶೂರೆನ್ಸ್, ಪಿಪಿಎಫ್, ಎನ್‌ಎಸ್‌ಸಿ, 5-ವರ್ಷದ ಎಫ್ಡಿ, ಇಎಲ್‌ಎಸ್‌ಎಸ್ ಜಾತಿಯ ಮ್ಯೂಚುವಲ್ ಫಂಡ್, ಇಬ್ಬರು ಮಕ್ಕಳ ಶಾಲಾ ಟ್ಯೂಶನ್ ಇತ್ಯಾದಿಗಳ ಪಟ್ಟಿಯಲ್ಲಿ ಗೃಹಸಾಲದ ಅಸಲು ಭಾಗ ಕೂಡ ಸೇರಿದೆ. ಇದನ್ನೂ ಜಂಟಿ ಸಾಲದ ದಂಪತಿ ಮೇಲೆ ಹೇಳಿದಂತೆ ಗೃಹಮಾಲಕತ್ವ ಮತ್ತು ಸಾಲದಲ್ಲಿ ತಮ್ಮ ಪಾಲು ಹೊಂದಿಕೊಂಡು ಹಂಚಿಕೊಳ್ಳಬಹುದು.
ಕೆಲವೊಮ್ಮೆ ಕೈಯಲ್ಲಿ ಹಣವಿದ್ದಂತೆ ಸಾಲದ ಅಸಲು ಭಾಗವನ್ನು ಭಾಗಶಃ ಮರುಪಾವತಿ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿಯೂ ಅಸಲಿನ ಮರುಪಾವತಿಯನ್ನು ಈ 80ಸಿ ಸೆಕ್ಷನ್ ಅಡಿಯಲ್ಲಿ ಕರಲಾಭಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ಒಂದಕ್ಕಿಂತ ಹೆಚ್ಚು ಗೃಹ ಸಾಲ: ಒಂದಕ್ಕಿಂತ ಜಾಸ್ತಿ ಮನೆ ಇರುವವರು ಅದರಲ್ಲಿ ಯಾವುದಾದರೂ ಒಂದನ್ನು (ನಿಮ್ಮ ಆಯ್ಕೆಯಂತೆ) ಮಾತ್ರ ಶೂನ್ಯ ಆದಾಯದ ಸ್ವಂತ ವಾಸದ್ದೆಂದು ಗುರುತಿಸಬಹುದಾಗಿದೆ. ಉಳಿದ ಮನೆಗಳೆಲ್ಲವೂ ಬಾಡಿಗೆಯದ್ದೆಂದು ಗುರುತಿಸಿ ಅವುಗಳಿಂದ ಬಾಡಿಗೆ ಬಂದಿದೆಯೆಂದೇ ಪರಿಗಣಿಸಿ (ಖಾಲಿ ಬಿದ್ದಿದ್ದರೂ ಸಹ) ಅದರ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು.
ಒಂದು ವೇಳೆ ನೀವು ಇನ್ನೊಂದು, ಮಗದೊಂದು ಮನೆಗಾಗಿ ಎರಡನೆಯ, ಮೂರನೆಯ ಇತ್ಯಾದಿ ಗೃಹಸಾಲ ಪಡೆದಿದ್ದಲ್ಲಿ ಅದನ್ನು ಬಾಡಿಗೆಗೆ ನೀಡಿದ್ದಲ್ಲಿ ಯಾ ಕಾನೂನು ಪ್ರಕಾರ ನೀಡಿದೆಯೆಂದು ಪರಿಗಣಿಸಿದ್ದಲ್ಲಿ ಅಂತಹ ಸಾಲಗಳ ಬಡ್ಡಿಗಳ ಮೇಲೂ ಯಾವುದೇ ಮಿತಿಯಿಲ್ಲದೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಅಂತಹ ಸಂದರ್ಭದಲ್ಲಿ ಮನೆಯ ವಾರ್ಷಿಕ ಮೌಲ್ಯವನ್ನು ಆದಾಯವಾಗಿ ತೋರಿಸಿ ಅದರಿಂದ ಮುನಿಸಿಪಲ್ ಟ್ಯಾಕ್ಸ್ ಕಳೆದು ಆ ಬಳಿಕ ಅದರ 30% ಅನ್ನು ರಿಪೇರಿ ಇತ್ಯಾದಿ ಬಾಬ್ತು ಸ್ಟಾಂಡರ್ಡ್ ಖರ್ಚು (ನಿಜವಾದ ಖರ್ಚು ಎಷ್ಟೇ ಇದ್ದರೂ ಈ 30% ಲಭ್ಯ) ಎಂದು ಕಳೆದು ಉಳಿದ ಮೊತ್ತವನ್ನು ನಿವ್ವಳ ಆದಾಯವಾಗಿ ತೋರಿಸತಕ್ಕದ್ದು ಇಲ್ಲಿ ರೂ. 2 ಲಕ್ಷದ ವಾರ್ಷಿಕ ಬಡ್ಡಿಯ ಮಿತಿ ಇರುವುದಿಲ್ಲ. ಈ ರೀತಿ ಯಾವುದೇ ಮಿತಿಯಿಲ್ಲದೆ ಸಾಲದ ಬಡ್ಡಿಯ ಮೇಲೆ ಕರವಿನಾಯಿತಿ ಲಭಿಸುವುದರಿಂದಾಗಿ ಮತ್ತು ಮನೆ ಬಾಡಿಗೆಯೂ ಬರುವುದರಿಂದ ಸಾಲ ಮಾಡಿ ಮನೆಕಟ್ಟಿ ಬಾಡಿಗೆಗೆ ನೀಡುವುದು ಹಲವರ ಪಾಲಿಗೆ ಒಂದು ಆಕರ್ಷಕ ಯೋಜನೆಯಾಗಿರುತ್ತದೆ. ಆದರೆ ಸ್ವಂತವಾಸವಲ್ಲದ ಇಂತಹ ಮನೆಗಳಿಗೆ ಅಸಲಿನ ಮರುಪಾವತಿಯ ಕರಲಾಭ ದೊರೆಯುವುದಿಲ್ಲ. ಆ ಸೌಲಭ್ಯ ಸ್ವಂತವಾಸದ ಮನೆಗಳಿಗೆ ಮಾತ್ರ ಲಭ್ಯ.
– ಜಯದೇವ ಪ್ರಸಾದ ಮೊಳೆಯಾರ