Advertisement
ಬೆಳ್ಳಾರೆ: ಸುಳ್ಯ ತಾಲೂಕಿನ ಪ್ರಕೃತಿ ರಮಣೀಯ ತಾಣವಾದ ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ 1903ರಲ್ಲಿ ಆರಂಭವಾದ ಶಾಲೆಗೆ ಈಗ 116ರ ಹರೆಯ. ತೀರಾ ಮಲೆನಾಡು ಪ್ರದೇಶವಾಗಿದ್ದು, ಯಾವುದೇ ಸಂಪರ್ಕ, ಸೌಕರ್ಯಗಳಿಂದ ವಂಚಿತವಾಗಿದ್ದ ಈ ಪುಟ್ಟ ಹಳ್ಳಿಗೆ ಜ್ಞಾನ ದೇಗುಲವನ್ನು ಹೊಂದುವುದು ಇಲ್ಲಿಯ ಹಿರಿಯ ಮೇಧಾವಿಗಳ ಕನಸಾಗಿತ್ತು. ಅದರಂತೆ 1903ರಲ್ಲಿ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪಶ್ಚಿಮ ಭಾಗದಲ್ಲಿ ದಿ| ವಾರಾಣಸಿ ರಾಮಕೃಷ್ಣಯ್ಯನವರ ಹುಲ್ಲು ಚಾವಣಿಯ ಕೊಟ್ಟಿಗೆಯೊಂದರಲ್ಲಿ ಕೇವಲ 8 ವಿದ್ಯಾರ್ಥಿಗಳಿಂದ ಖಾಸಗಿ ಶಾಲೆ ಆರಂಭಗೊಂಡಿತು.
ದಿ| ಕೋಟೆ ಸುಬ್ರಾಯ ಭಟ್ಟ ಅವರು ಕೋಟೆಮುಂಡುಗಾರು ಶಾಲೆಯ ಆರಂಭಿಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಆದರೆ 1905ರಲ್ಲಿ ತಾತ್ಕಾಲಿಕವಾಗಿ ಈ ಶಾಲೆ ಮುಚ್ಚಿತು. ಸುಬ್ರಾಯ, ಸುಬ್ರಾಯ ಕಾಂಚೋಡು, ಕೆದಿಲ ನಾರಾಯಣ ಭಟ್, ಕೋಟೆ ಲಿಂಗಪ್ಪಯ್ಯ, ಕೋಟೆ ಪರಮೇಶ್ವರಯ್ಯ, ವಾರಣಾಸಿ ರಾಮಕೃಷ್ಣಯ್ಯ ಮುಂತಾದವರ ಪ್ರಯತ್ನದ ಫಲವಾಗಿ 1906ರಲ್ಲಿ ಸರಕಾರಿ ಶಾಲೆಯಾಗಿ ಮತ್ತೆ ಆರಂಭವಾಯಿತು. ಮಂಗೇಶರಾಯರು ಕವಿತೆ ಬರೆದರು
1907-08ರಲ್ಲಿ ವಾರಾಣಸಿ ಸುಬ್ರಾಯ ಮತ್ತು ಕೆದಿಲ ನಾರಾಯಣ ಭಟ್ಟರ ನೇತೃತ್ವದಲಿ
ಕಟ್ಟಡ ರಚನೆಯಾಯಿಯಿತು. ನಾಲ್ಕು ತರಗತಿಗಳಲ್ಲಿ 31 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಮಲೆನಾಡು ಪ್ರದೇಶವಾದ ಇಲ್ಲಿ ಮಲೇರಿಯಾ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ಆ ದಿನಗಳಲ್ಲಿ ಶಾಲೆಗೆೆ ಗೈರಾಗುತ್ತಿದ್ದರು. ಇದೇ ವರ್ಷ ಪಂಜೆ ಮಂಗೇಶರಾಯರು ಶಾಲೆಯಲ್ಲಿ ಒಂದು ದಿನ ತಂಗಿದ್ದರು. ಇಲ್ಲಿನ ಪರಿಸರದ ಸ್ಫೂರ್ತಿಯಿಂದ “ಬಾ ನೊಣವೇ ಬಾ ನನ್ನ ಮನೆಗೆ’ ಎಂಬ ಕವಿತೆಯನ್ನೂ ಅವರು ರಚಿಸಿದ್ದರು.
Related Articles
1930ರಲ್ಲಿ ದಿ| ಮೊಳಹಳ್ಳಿ ಶಿವರಾಯರು ಮತ್ತು ಡಾ| ಕೋಟೆ ಶಿವರಾಮ ಕಾರಂತರು ಶಾಲೆಗೆ ಭೇಟಿ ನೀಡಿದ್ದರು. 1955ರಲ್ಲಿ ಮಹಾತ್ಮಾ ಗಾಂಧೀಜಿಯವರ ನಿಷ್ಠಾವಂತ ಅನುಯಾಯಿಯಾಗಿದ್ದ ಸಿ.ಜಿ. ರಾಮಚಂದ್ರನ್ ಅವರು ಶಾಲೆಯನ್ನು ಸಂದರ್ಶಿಸಿದ್ದರು.
Advertisement
ಶಾಲೆಯ ಅಭಿವೃದ್ಧಿಶಾಲೆಗೆ ಬೇಕಾದ ಅಡಿಸ್ಥಳವನ್ನು ಕೋಟೆ ಹೊನ್ನಮ್ಮ ಅವರು ಉದಾರವಾಗಿ ಬಿಟ್ಟುಕೊಟ್ಟಿದ್ದರು. ಆಗಿನ ಪಂಚಾಯತ್ ಅಧ್ಯಕ್ಷ ದಳ ಸುಬ್ರಾಯ ಭಟ್ಟರ ನೇತೃತ್ವದಲ್ಲಿ ಪಿರ್ಕ ಡೆವಲಪ್‌ಮೆಂಟ್ ಸಹಕಾರದಲ್ಲಿ ಮೈದಾನ ವಿಸ್ತಾರವಾಯಿತು. ಶಾಲಾ ಇತಿಹಾಸದಲ್ಲಿ 1963 ಒಂದು ಮಹತ್ವದ ಘಟ್ಟ. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. 1964-65ರಲ್ಲಿ ವಿಶಾಲವಾದ ಶಾಲಾ ಕೊಠಡಿ, ರಂಗ ಮಂಟಪ ಸಾಂಸ್ಕೃತಿಕ ಚಟುವಟಿಕೆಗೆ ಬೇಕಾದ ಪರದೆಗಳು, ಪೀಠೊಪಕರಣಗಳು ರಚನೆಗೊಂಡವು. ಅಧ್ಯಾಪಕರ ಸಂಖ್ಯೆಯೂ 5ಕ್ಕೆ ಏರಿತು. ಮುಂದೆ 1974ರ ಬಳಿಕ ಶಾಲಾ ಇತಿಹಾಸ ಹೊಸದೊಂದು ಅಧ್ಯಯವನ್ನು ಸ್ಥಾಪಿಸಿತು. ಎನ್. ಮಹಾಬಲ ರೈ ಅವರು ಊರವರ ಅಪೇಕ್ಷೆಯಂತೆ ಶಾಲಾ ಮುಖ್ಯೋಪಾಧ್ಯಾಯರಾಗಿ ವರ್ಗಗೊಂಡು ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು. 1974ರಲ್ಲಿ ವಾರಾಣಸಿ ಸೀತರಾಮಯ್ಯರು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದರೆ ಕೋಟೆ ವಸಂತ ಕುಮಾರ್ ಅವರು ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಅಂದು ಯಕ್ಷಗಾನದ ಧೀಮಂತ ಪ್ರತಿಭೆಗಳಾದ ತಂಟೆಪ್ಪಾಡಿ ಶಾಂ ಭಟ್, ಎ. ಶಿವರಾಮ ಮಾಸ್ಟರ್ ಹಾಗೂ ಚೆಂಡೆ ಮಾಸ್ಟರ್ ಎಂದೇ ಖ್ಯಾತಿ ಪಡೆದ ಪೆರ್ಲಂಪಾಡಿ ಬಾಬು ಗೌಡ ಅವರು ಇಲ್ಲಿನ ಸಾಂಸ್ಕೃತಿಕ ರಂಗದಲ್ಲಿ ಮುಂಚೂಣಿಯಲ್ಲಿ ದುಡಿದರು. 1980-81ರ ಸಮಯದಲ್ಲಿ 325ರ ವರೆಗೆ ಮಕ್ಕಳಿದ್ದರು. ಶತಮಾನದ ಸಾಧಕರು
ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಖ್ಯಾತ ಗಾಯಕ ಶಶಿಧರ ಕೋಟೆ ಮತ್ತು ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ಶತಮಾನೋತ್ಸವದ ಸಂದರ್ಭ ಶತಮಾನದ ಸಾಧಕರಾಗಿ ಸಮ್ಮಾನಿಸಲಾಗಿದೆ. ಇಲ್ಲಿನ ಹಳೆ ವಿದ್ಯಾರ್ಥಿಗಳಾದ ರಘುರಾಮ ಕೋಟೆ, ಗಣೇಶ್‌ರಾಜ್, ಡಾ| ರಶ್ಮಿ ಕೆದಿಲ, ರಾಮಕೃಷ್ಣ ಮುಂಡುಗಾರು ಮುಂತಾದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಒಟ್ಟು 1.50 ಎಕ್ರೆ ವಿಸ್ತೀರ್ಣದ ವ್ಯಾಪ್ತಿ ಹೊಂದಿರುವ ಕೋಟೆ ಮುಂಡುಗಾರು ಶಾಲೆಯಲ್ಲಿ ಪ್ರಸ್ತುತ ಮೂವರು ಖಾಯಂ ಶಿಕ್ಷಕರಿದ್ದಾರೆ. ಒಂದರಿಂದ ಏಳನೇ ತರಗತಿಯವರಗೆ 45 ವಿದ್ಯಾರ್ಥಿಗಳಿದ್ದಾರೆ. 10ಕ್ಕೂ ಅಧಿಕ ಶಾಶ್ವತ ದತ್ತಿ ನಿಧಿಗಳಿವೆ. ಭಜನ ದತ್ತಿ ನಿಧಿಯೂ ಇದೆ. ಗಮನ ಸೆಳೆವ ತೋಟ
ಶಾಲೆಯ ತೆಂಗಿನ ತೋಟವನ್ನು ಕಂಡ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಲ್ಲೂ ಶಾಲಾ ಕೈತೋಟ ಮಾಡುವಂತೆ ಆದೇಶಿಸಿತ್ತು. ಇಲ್ಲಿನ ತೆಂಗಿನ ಫಸಲಿನಿಂದ ಬರುವ ಆದಾಯ ತಾಲೂಕು ಬೋರ್ಡ್‌ಗೆ ಸಂದಾಯವಾಗುತ್ತಿತ್ತು. ಈಗಲೂ ಶಾಲೆಯಲ್ಲಿ ಬಿಸಿಯೂಟಕ್ಕೆ ತರಕಾರಿ ಬೆಳೆಸಲಾಗಿದೆ. ತೆಂಗಿನ ತೋಟದ ಜತೆಗೆ ನೆಲ್ಲಿಕಾಯಿ, ಮಾವು, ಹಲಸು, ಗೇರು, ಬಾದಾಮಿ, ಸಾಗುವಾನಿ ಮರಗಳಿವೆ. ಇಲ್ಲಿ ಕಲಿತ ಹಳೆ ವಿದ್ಯಾರ್ಥಿ ಗಳು ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಶಾಲೆಯಲ್ಲಿ ಎಲ್ಲ ಮೂಲ ಸೌಲಭ್ಯಗಳಿವೆ. ಶಾಲೆಗೆ ತೆರದ ಬಾವಿ, ಸ್ಮಾರ್ಟ್ ಕ್ಲಾಸ್, ಮಕ್ಕಳ ಆಟೋಟಕ್ಕೆ ಉಯ್ನಾಲೆ, ಜಾರುಬಂಡಿಯ ಆವಶ್ಯಕತೆ ಇದೆ.
-ಮೋಹಿನಿ ಎ.ಕೆ., ಪ್ರಭಾರ ಮುಖ್ಯ ಶಿಕ್ಷಕಿ ನಾವು ಕಲಿ ಯುತ್ತಿದ್ದಾಗ ಶಿಕ್ಷಕರು ಶಾಲೆಯನ್ನು ಮನೆಯ ಹಾಗೆ ನೋಡಿ ಕೊಳ್ಳುತ್ತಿದ್ದರು. ಇಲ್ಲಿನ ಶಿಕ್ಷಕರು ಹೇಳಿಕೊಟ್ಟ ಶಿಸ್ತು, ಜೀವನ ಕ್ರಮ ನಮ್ಮಲ್ಲಿನ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗಿದೆ. ಪಠ್ಯದ ವಿಷಯವನ್ನು ಮಾತ್ರ ಬೋಧಿಸದೆ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ.
-ವಸಂತ ಶೆಟ್ಟಿ ಬೆಳ್ಳಾರೆ , ಹಳೆವಿದ್ಯಾರ್ಥಿ (ಮಾಜಿ ಅಧ್ಯಕ್ಷರು, ದೆಹಲಿ ಕರ್ನಾಟಕ ಸಂಘ) – ಉಮೇಶ್ ಮಣಿಕ್ಕಾರ