Advertisement

ಜಾಗ ನೀಡಿದ್ರೆ ಕೋಟೆ ರಸ್ತೆ ಅಭಿವೃದ್ಧಿ:ಅನಿಲ್ಕುಮಾರ್‌

10:51 AM Jun 02, 2019 | Suhan S |

ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ಪ್ರವಾಸೋದ್ಯಮದಲ್ಲಿ ಹೆಗ್ಗುರುತಾಗಬೇಕು. ನೇರ ರಸ್ತೆಗೆ ಜಾಗ ಬಿಟ್ಟು ಕೊಟ್ಟಲ್ಲಿ ಅನುದಾನ ನೀಡಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ಕುಮಾರ್‌ ಹೇಳಿದರು.

Advertisement

ಇಲ್ಲಿನ ಐತಿಹಾಸಿಕ ಕೋಟೆ ಮತ್ತು ಚಂದ್ರವಳ್ಳಿ ಪ್ರವಾಸಿ ತಾಣಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು, ಪುರಾತತ್ವ ಇಲಾಖೆ, ಕಂದಾಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.

ಐತಿಹಾಸಿಕ ಕೋಟೆಗೆ ರಂಗಯ್ಯನಬಾಗಿಲು, ಆನೆಬಾಗಿಲು, ಕರುವಿನಕಟ್ಟೆ ಸೇರಿದಂತೆ ಮತ್ತಿತರ ಎಲ್ಲ ಮಾರ್ಗಗಳಲ್ಲಿ ರಸ್ತೆ, ಪಾದಚಾರಿ ದಾರಿಯನ್ನು ಒತ್ತುವರಿ ಮಾಡಲಾಗಿದೆ. ಇದರಿಂದ ಕೋಟೆಗೆ ನೇರವಾಗಿ ಬಸ್‌ ಸೇರಿದಂತೆ ಇತರೆ ಕಾರು ವಾಹನಗಳು ಸುಲಭವಾಗಿ ತೆರಳು ಆಗುತ್ತಿಲ್ಲ. ಇದರಿಂದ ಪ್ರವಾಸಿಗರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಸ್ಟೇಡಿಯಂ ರಸ್ತೆ ಮೂಲಕ ಜಿ.ಜಿ. ಕಲ್ಯಾಣ ಮಂಟಪದ ಮಾರ್ಗವಾಗಿ ಜೋಗಿಮಟ್ಟಿ ರಸ್ತೆ ಕ್ರಾಸ್‌ ಮಾಡಿಕೊಂಡು ಅಗಳು ಪ್ರದೇಶದ ಮೂಲಕ ಕೋಟೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಸೂಕ್ತ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಟ್ಟಲ್ಲಿ ಶೀಘ್ರದಲ್ಲೇ ಡಬಲ್ ರಸ್ತೆ ನಿರ್ಮಿಸಲಾಗುತ್ತದೆ ಎಂದು ಅನಿಲ್ಕುಮಾರ್‌, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಅವರಲ್ಲಿ ಕೋರಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪವಿಭಾಗಾಧಿಕಾರಿಗಳು, ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೋಟೆ ಮೇಲ್ಭಾಗದಲ್ಲಿ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಓಬವ್ವನ ಕಿಂಡಿ, ಹತ್ತಾರು ದೇವಸ್ಥಾನಗಳ ಪ್ರದೇಶ ಸೇರಿದಂತೆ ಹಲವು ಮಹತ್ವದ ಸ್ಥಳಗಳಿಗೆ ಭೇಟಿ ನೀಡಿದ ಅನಿಲ್ಕುಮಾರ್‌, ಅವುಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕುಮಾರ ಪುಷ್ಕರ್‌, ಪುರಾತತ್ವ ಇಲಾಖೆಯ ರಂಗನಾಥ್‌, ಜಿಲ್ಲಾ ಪ್ರವಾಸೋದ್ಯಮಾಧಿಕಾರಿ ತಿಪ್ಪೇಸ್ವಾಮಿ ಇದ್ದರು.

ಮೂಲ ಸೌಲಭ್ಯ ಕಲ್ಪಿಸಲು ನೀಲನಕ್ಷೆ ಕೊಡಿ:

ಕೋಟೆ ಮೇಲ್ಭಾಗದಲ್ಲಿ ಪ್ರವಾಸಿಗರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಲಜೇಗ್‌ ರೂಂ ಸೇರಿದಂತೆ ಮತ್ತಿತರ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಲು ಸಮಗ್ರ ನೀಲನಕ್ಷೆ ತಯಾರಿಸಿ ಕಳುಹಿಸಿಕೊಡಬೇಕು. ಐತಿಹಾಸಿಕ ಕೋಟೆ ಜೊತೆಯಲ್ಲಿ ಚಂದ್ರವಳ್ಳಿ ಪ್ರವಾಸಿ ತಾಣದಲ್ಲಿ 8 ಎಕರೆ ವಿಶಾಲವಾದ ಜಾಗ ಇದ್ದು ಈ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯಲು ಏನು ಮಾಡಬೇಕು ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರವಾಗಿ ಡಿಪಿಆರ್‌ ಮಾಡಿಕೊಡುವಂತೆ ಸೂಚನೆ ನೀಡಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next