ಮುಂಬಯಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಆಟೋಟಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳ ಬೇಕಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಪ್ರಮುಖ ಉದ್ದೇಶವಾಗಿರಬೇಕೇ ವಿನಾ ಬಹುಮಾನ ಗಳಿಸುವುದು ಒಂದೇ ಗುರಿಯಾಗಿರ ಬಾರದು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದೆ. ನಿಯಮಿತ ದೈನಂದಿನ ಕ್ರೀಡೆಯು ವಿದ್ಯಾರ್ಥಿಗಳಿಗೆ ತಮ್ಮ ಶಾರೀರಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಕನ್ನಡ ಭವನ ಎಜುಕೇಶನ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷ ದಯಾನಂದ ಬಿ. ಅಮೀನ್ ಅಭಿಪ್ರಾಯಿಸಿದರು.
ಅವರು ಡಿ. 9ರಂದು ಫೋರ್ಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮೈದಾನದಲ್ಲಿ ಜರಗಿದ ಮುಂಬಯಿ ಕನ್ನಡಿಗರ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ಕನ್ನಡ ಭವನ ಎಜುಕೇಶನ್ ಸೊಸೈಟಿಯ ಹೈಸ್ಕೂಲ್ ಮತ್ತು ಕಿರಿಯ ಮಹಾವಿದ್ಯಾಲಯದ ವಾರ್ಷಿಕ ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಇನ್ನೋರ್ವ ಉಪ ಕಾರ್ಯಾಧ್ಯಕ್ಷ ಕೇಶವ ಕೆ. ಕೋಟ್ಯಾನ್ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸದಭೋì ಚಿತವಾಗಿ ಮಾತನಾಡಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲೆಯಲ್ಲಿ ಪ್ರಾಥಮಿಕ ಸಬ್ ಜ್ಯೂನಿಯರ್ ವಿಭಾಗದಿಂದ ನಿರ್ಮಲ ಭೀಮರಾಯ, ಶರಣಮ್ಮ ಕೊಳಿ ಮತ್ತು ರೋಹಿತ್ ರಾಟೋಡ್, ಮಾಧ್ಯಮಿಕ ವಿಭಾಗದ ಜ್ಯೂನಿಯರ್ ವಿಭಾಗದಿಂದ ಬಾಲಮ್ಮ ಧನಗರ್ ಮತ್ತು ಆಕಾಶ್ ರಾಥೋಡ್ ಹಾಗೂ ಉಚ್ಚ ಮಾಧ್ಯಮಿಕ ಸೀನಿಯರ್ ವಿಭಾಗದಿಂದ ಸ್ನೇಸಾ ಸ್ವಾಮಿ ಮತ್ತು ಅಂಕುಶ್ ಗಂಡನೂರ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಕಾಲೇಜು ವಿಭಾಗದಿಂದ ನಿಶಾ ಆರ್. ಗುಪ್ತ ಮತ್ತು ಮಾನ್‌ಸಿಂಗ್ ಭುಲ್ ಇವರುಗಳು ಅತೀ ಹೆಚ್ಚಿನ ಬಹುಮಾನಗಳೊಂದಿಗೆ ಚಾಂಪಿಯನ್ ಸ್ಥಾನ ಗಳಿಸಿದರು. ಉಪಸ್ಥಿತ ಅತಿಥಿಗಳು ಹಾಗೂ ಪದಾಧಿಕಾರಿಗಳು ವಿಜೇತರಿಗೆ ಫಲಕ ಹಾಗೂ ಪ್ರಮಾಣ ಪತ್ರವನ್ನು ಪ್ರದಾನಿಸಿ ಅಭಿನಂದಿಸಿದರು. ಆರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಎಲ್. ರಾಧಾಕೃಷ್ಣನ್ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮುಂದಿನ ವರ್ಷ ನಿವೃತ್ತರಾಗಲಿರುವ ಕಾಲೇಜಿನ ಹಿರಿಯ ಶಿಕ್ಷಕ ವಿಜಯ ಸಾಲ್ವಿ ಅವರು, ಕನ್ನಡ ಭವನದಲ್ಲಿನ ತನ್ನ 29 ವರ್ಷಗಳ ಸಿಹಿ ಅನುಭವವನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಬಹುಮಾನಿತರ ಯಾದಿಯನ್ನು ಶಾಲಾ ಶಿಕ್ಷಕಿ ವಸಂತಿ ಶೆಟ್ಟಿ ಹಾಗೂ ಕಾಲೇಜಿನ ಶಿಕ್ಷಕ ವಿಜಯ ಸಾಲ್ವಿ ವಾಚಿಸಿದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಅಮೃತಾ ಎ. ಶೆಟ್ಟಿ ನಿರೂಪಿಸಿದರು, ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.
ವೇದಿಕೆಯಲ್ಲಿ ಗೌರವ ಕೋಶಾಧಿಕಾರಿ ಪುರುಶೋತ್ತಮ ಎಂ. ಪೂಜಾರಿ, ಜತೆ ಕೋಶಾಧಿಕಾರಿ ಸತೀಶ್ ಎನ್. ಬಂಗೇರ, ಆಡಳಿತ ಮಂಡಳಿಯ ಸದಸ್ಯ ಹರೀಶ ಕೆ. ಪೂಜಾರಿ, ಶಾಲಾ ಹಿರಿಯ ಶಿಕ್ಷಕಿ ವಸಂತಿ ಎ. ಶೆಟ್ಟಿ, ಕಾಲೇಜಿನ ಮಾಜಿ ಶಿಕ್ಷಕಿ ಭಾರತಿ ಮೂಡ್‌ಭಟ್ಕಳ್ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ. ಅಮೀನ್ ಕ್ರೀಡಾಕೂಟದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳನ್ನು ಹಾಗೂ ಸಹಕರಿಸಿದ ಶಿಕ್ಷಕ, ಶಿಕ್ಷಕೇತರ ವೃಂದ, ನೆರೆದ ಅತಿಥಿಗಳನ್ನು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.