Advertisement

ಚಾಮುಂಡಿಬೆಟ್ಟ ರಕ್ಷಣೆಗೆ ಪ್ರತ್ಯೇಕ ಕಾಯ್ದೆ ರೂಪಿಸಿ

03:52 PM Apr 04, 2022 | Team Udayavani |

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಹಾಗೂ ಬೆಟ್ಟದ ಮೆಟ್ಟಿಲುಗಳಿಗೆ ರೇಲಿಂಗ್ಸ್‌ ಅಳವಡಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಪರಿಸರವಾದಿಗಳು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗಾಗಿ ಚಾಮುಂಡಿಬೆಟ್ಟ ಸಂರಕ್ಷಣಾ ಮಸೂದೆ ಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಇದನ್ನು ಅಂಗೀಕರಿಸಿ ಕಾಯ್ದೆಯನ್ನು ರೂಪಿಸಬೇಕೆಂದು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸಲಾಗಿದೆ.

ಮೈಸೂರಿನ ಅನೇಕ ಪರಿಸರ ಸಂಘ-ಸಂಸ್ಥೆಗಳನ್ನು ಒಳಗೊಂಡ ಚಾಮುಂಡಿಬೆಟ್ಟ ಉಳಿಸಿ ಸಮಿತಿ ಆಶ್ರಯ ದಲ್ಲಿ ಇಲ್ಲಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ದುಂಡುಮೇಜಿನ ಸಭೆಯಲ್ಲಿ ಈ ಒತ್ತಾಯ ಮಾಡಲಾಗಿದೆ.

ಪ್ರಾಕೃತಿಕ ಸೌಂದರ್ಯ ಉಳಿಸಿ: ಚಾಮುಂಡಿಬೆಟ್ಟದ ಧಾರ್ಮಿಕ ಪಾವಿತ್ರ್ಯತೆ ಮತ್ತು ಪ್ರಾಕೃತಿಕ ಸೌಂದರ್ಯದ ಉಳಿವಿಗಾಗಿ ಈ ದುಂಡುಮೇಜಿನ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ವಿಷಯ ಮಂಡಿಸಿದ ತಜ್ಞರು ಪರಿಸರಕ್ಕೆ ಧಕ್ಕೆ ತಂದು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದನ್ನು ಖಡಾಖಂಡಿತವಾಗಿ ವಿರೋಧಿಸಿದರು.

ಧಕ್ಕೆ ತರುವ ಯೋಜನೆ ಬೇಡ: ಚಾಮುಂಡಿಬೆಟ್ಟ ಪರಿಸರ ಕಾಪಾಡಬೇಕು. ಬೆಟ್ಟಕ್ಕೆ ಅಪಾಯವಾಗುವ ಯಾವುದೇ ಕೆಲಸ ಮಾಡಬಾರದು. ಬೆಟ್ಟದ ಮೂಲ ಅಸ್ತಿ ತ್ವಕ್ಕೆ ಧಕ್ಕೆ ತರುವ ಯಾವುದೇ ಯೋಜನೆಯನ್ನು ಜಾರಿಗೊಳಿಸಬಾರದು ಎಂಬ ಒತ್ತಾಯವನ್ನು ಮಾಡಲಾಯಿತು.

Advertisement

ಕಮರ್ಷಿಯಲ್‌ ಟೂರಿಸಂ ಅಗತ್ಯವಿಲ್ಲ: ನಿವೃತ್ತ ಮೇಜರ್‌ ಜನರಲ್‌ ಸುಧೀರ್‌ ಒಂಬತೆRರೆ ಮಾತನಾಡಿ, ಚಾಮುಂಡಿಬೆಟ್ಟದಲ್ಲಿ ಕಮರ್ಷಿಯಲ್‌ ಟೂರಿಸಂ ಅಗತ್ಯವಿಲ್ಲ. ಪರಿಸರಕ್ಕೆ ಧಕ್ಕೆ ತಂದು ಲಾಭ ಮಾಡುವುದನ್ನು ಕೈಬಿಡಬೇಕು. ಚಾಮುಂಡಿಬೆಟ್ಟದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕು. ಚಾಮುಂಡಿಬೆಟ್ಟದ ಪರಿಸರ ಈಗ ಹಾಳಾಗುತ್ತಿದೆ. ಬೆಟ್ಟ ಕೆಲವು ಕಡೆ ಕುಸಿಯುತ್ತಿದೆ ಎಂದು ತಿಳಿಸಿದರು. ವನ್ಯಜೀವಿ ತಜ್ಞ ಕೃಪಾಕರ್‌ ಮಾತನಾಡಿ, ಚಾಮುಂಡಿಬೆಟ್ಟ ಎಷ್ಟೋ ವರ್ಷಗಳಿಂದ ಮಳೆ, ಗಾಳಿ, ಗುಡುಗು, ಸಿಡಿಲುಗಳನ್ನು ತಡೆದುಕೊಂಡು ನಿಂತಿದೆ. ಆದರೆ, ಮನುಷ್ಯರ ಹಾನಿಯಿಂದ ಅದು ಈಗ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಮೆರಿಕಾದಲ್ಲಿ ಪರಿಸರಕ್ಕೆ ಧಕ್ಕೆ ತಂದು ನಿರ್ಮಿಸಿದ ಜಲಾಶಯಗಳನ್ನು ನಂತರ ತಪ್ಪಿನ ಅರಿವಾಗಿ ಒಡೆದು ಹಾಕಿದ ಉದಾಹರಣೆ ನಮ್ಮ ಮುಂದಿದೆ ಎಂದು ಹೇಳಿದರು.

ಹೊಂದಾಣಿಕೆ ಕೊರತೆ ಇದೆ: ಜಲತಜ್ಞ ಪ್ರೊ.ಯು.ಎ ನ್‌.ರವಿಕುಮಾರ್‌ ಮಾತನಾಡಿ, ಚಾಮುಂಡಿಬೆಟ್ಟ ಒಂದು ಜಲಾನಯನ ಪ್ರದೇಶವಾಗಿದೆ. ಬೆಟ್ಟದ ಮೇಲೆ ನೀರು ಇಂಗಲು ಅವಕಾಶವಿದೆ. ಬೆಟ್ಟದಲ್ಲಿ ವಾರ್ಷಿಕ 780 ಮಿಲಿಮೀಟರ್‌ ಮಳೆಯಾಗುತ್ತದೆ. ಚಾಮುಂಡಿಬೆಟ್ಟದ ವಿಚಾರದಲ್ಲಿ ಐದು ಇಲಾಖೆಗಳ ಮಧ್ಯೆ ಹೊಂದಾ ಣಿಕೆ ಕೊರತೆ ಇದೆ ಎಂದು ಹೇಳಿದರು.

ಭೂಗರ್ಭ ಶಾಸ್ತ್ರಜ್ಞ ಪ್ರೊ.ಜನಾರ್ದನ್‌ ಅವರು ಮಾತನಾಡಿ, ಚಾಮುಂಡಿಬೆಟ್ಟ ನೈಸರ್ಗಿಕವಾಗಿ ಕ್ಷೀಣಿಸುತ್ತಿದೆ. ಇಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ತಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಜೀವ ವೈವಿಧ್ಯತೆ ಬರಡು: ಪರಿಸರ ತಜ್ಞ ಎ.ಶಿವಪ್ರಕಾಶ್‌ ಅಡವಣ್ಣೆ ಮಾತನಾಡಿ, ಚಾಮುಂಡಿಬೆಟ್ಟದಲ್ಲಿ ವಿವಿಧ 500 ತಳಿಗಳ ಸಸ್ಯಗಳಿವೆ. ಅನೇಕ ಸಸ್ಯಗಳಲ್ಲಿ ಔಷಧೀಯ ಗುಣಗಳಿವೆ. ಬೆಟ್ಟದಲ್ಲಿ 120 ವಿವಿಧ ಬಗೆಯ ಚಿಟ್ಟೆಗಳಿವೆ. ಚಾಮುಂಡಿಬೆಟ್ಟದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಜೀವ ವೈವಿಧ್ಯತೆ ಬರಡಾಗುತ್ತದೆ ಎಂದು ಎಚ್ಚರಿಸಿದರು. ಪರಿಸರ ತಜ್ಞ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಲೇಖಕಿ ರೂಪಾ ಹಾಸನ, ಪಶ್ಚಿಮಘಟ್ಟ ಪರಿಸರ ಹೋರಾಟಗಾರ ಎಚ್‌.ಶಶಿಧರ ಶೆಟ್ಟಿ ಅವರು ಆನ್‌ ಲೈನ್‌ ಮೂಲಕ ಮಾತನಾಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಪರಶುರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾ ಆಯರಹಳ್ಳಿ, ಕಾಳಚೆ ನ್ನೇಗೌಡ, ನೀಲಾ ಶಿವಕುಮಾರ್‌, ಪ್ರಭಾ ನಂದೀಶ್‌, ವೆಂಕಟೇಶ್‌ ಖರೀದಿ ಅವರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ :

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟ ಉಳಿಸಿ ಸಮಿತಿಯು ಬೆಟ್ಟದ ಪರಿಸರವನ್ನು ಕಾಪಾಡಬೇಕೆಂದು ಒತ್ತಾಯಿಸಿ 50 ಸಾವಿರ ಜನರ ಸಹಿ ಸಂಗ್ರಹಿಸಿದ್ದು, ಇದನ್ನು ಡಿಜಿಟಲ್‌ ರೂಪದಲ್ಲಿ ಪರಿವರ್ತಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ಪರಶುರಾಮೇಗೌಡ ಈ ವಿಷಯ ತಿಳಿಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಸೇರಿ ಯಾವುದೇ ಯೋಜನೆ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ತರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು. ಈ ಕುರಿತು ಮನವಿ ಪತ್ರವನ್ನು ಪ್ರಧಾನಿಗೆ ಇ-ಮೇಲ್‌ ಮೂಲಕ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಪರಶುರಾಮೇಗೌಡ ತಿಳಿಸಿದ್ದಾರೆ.

ರೋಪ್‌ ವೇ ನಿರ್ಮಾಣಕ್ಕೆ  ಅನುಮತಿ ಅಗತ್ಯ :

ಮೈಸೂರು: ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಹಾಗೂ ಮೆಟ್ಟಿಲುಗಳಿಗೆ ರೇಲಿಂಗ್ಸ್‌ ಅಳವಡಿಸುವ ಮುನ್ನ ಪಾರಂಪರಿಕ ಸಂರಕ್ಷಣಾ ಸಮಿತಿ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಈ ಸಮಿತಿಯ ಸದಸ್ಯರೂ ಆಗಿರುವ ಪಾರಂಪರಿಕ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ತಿಳಿಸಿದ್ದಾರೆ.

ಚಾಮುಂಡಿಬೆಟ್ಟ ಉಳಿಸಿ ಸಮಿತಿ ವತಿಯಿಂದ ಭಾನುವಾರ ಇಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ದಲ್ಲಿ ರೋಪ್‌ ವೇ ನಿರ್ಮಾಣ ಹಾಗೂ ಮೆಟ್ಟಿಲುಗಳಿಗೆ ರೇಲಿಂಗ್ಸ್‌ ಅಳವಡಿಕೆ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಎಚ್ಚರಿಸಿದರು. ಚಾಮುಂಡಿಬೆಟ್ಟ 3,489 ಅಡಿ ಎತ್ತರವಿದೆ. ಬೆಟ್ಟದಲ್ಲಿ 29 ಶಾಸನಗಳಿವೆ. ಬೆಟ್ಟದಲ್ಲಿ ಧಾರ್ಮಿಕ, ಪುರಾತತ್ವ, ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next