ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳು ಮನವಿ ಮಾಡಿವೆ. ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳ ಮುಖಂಡರು, ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ಹಣ ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಬೇಕು. ಅದಕ್ಕೆ ತಕ್ಕಂತೆ ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣ, ವೆಚ್ಚವಾದ ಮೊತ್ತ, ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ಮಾಹಿತಿ ನೀಡಿದ ಮುಖಂಡರು, ಸಮು ದಾಯದ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಯೋಜನೆಗಳ ಬಗ್ಗೆಯೂ ಸಲಹೆ-ಸೂಚನೆ ನೀಡಿದರು. ನಂತರ ಮಾತನಾಡಿದ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ಯು 2020-21 ನೇ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಭೂ ಒಡೆತನ, ಗಂಗಾ ಕಲ್ಯಾಣ ಹಾಗೂ ಯುವ ಜನತೆಗೆ ಅನು ಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವ್ಯಕ್ತವಾದ ಸಲಹೆ-ಸೂಚನೆ ಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಮುದಾಯಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಸಭೆಯಲ್ಲಿ ಎಂ.ವೆಂಕಟಸ್ವಾಮಿ, ಮಾವಳ್ಳಿ ಶಂಕರ್ ಸೇರಿ ವಿವಿಧ ಸಂಘಟನೆಗಳ ಮುಖಂಡರು ಸಲಹೆಗಳನ್ನು ನೀಡಿದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಸಲಹೆಗಾರ ಇ.ವೆಂಕಟಯ್ಯ, ಆಯುಕ್ತ ಪೆದ್ದಪ್ಪಯ್ಯ, ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯದ ನಿರ್ದೇಶಕ ಸಂಗಪ್ಪ ಸೇರಿ ಹಲವರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಡಿಸಿಎಂ ತಾಕೀತು: ಎಸ್‌ಸಿ, ಎಸ್‌ಟಿ ಸಮುದಾಯದ ಸಂಘಟನೆಗಳ ಮುಖಂಡರ ಜತೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ ಅವರು, ಸರ್ಕಾರವು ಸಮುದಾ ಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಿದೆ. ಅವುಗಳ ಲಾಭ ಅರ್ಹ ಫಲಾನು ಭವಿಗಳಿಗೆ ದೊರೆಯುವಂತೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಧೋರಣೆ ಸಹಿಸುವುದಿಲ್ಲ ಎಂದರು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ಯರ್ಥವಾಗಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಅಥವಾ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು.