ಬಾರ್ಬಡಾಸ್: ವೆಸ್ಟ್ ಇಂಡೀಸ್ನ ಭಯಾನಕ ಹಾಗೂ ಘಾತಕ ವೇಗಿಗಳ ಕಾಲಘಟ್ಟದಲ್ಲಿ ಅಮೋಘ ಕೀಪಿಂಗ್ ನಡೆಸಿ ವಿಶ್ವಖ್ಯಾತಿ ಪಡೆದ ಡೇವಿಡ್ ಮರ್ರೆ (72) ಇನ್ನು ನೆನಪು ಮಾತ್ರ. ಅವರ ನಿಧನವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಒಂದು ದಿನ ವಿಳಂಬವಾಗಿ ಘೋಷಿಸಿದೆ.
ಡೇವಿಡ್ ಆ್ಯಂಟನಿ ಮರ್ರೆ ವೆಸ್ಟ್ ಇಂಡೀಸ್ನ ಖ್ಯಾತ ತ್ರಿವಳಿ “ಡಬ್ಲ್ಯು’ ಗಳಲ್ಲಿ ಒಬ್ಬರಾದ ಎವರ್ಟನ್ ವೀಕ್ಸ್ ಅವರ ಪುತ್ರ. 1973ರ ಇಂಗ್ಲೆಂಡ್ ಪ್ರವಾಸದ ವೇಳೆ ವಿಂಡೀಸ್ ತಂಡಕ್ಕೆ ಆಯ್ಕೆಯಾದರು. ಆದರೆ ಟೆಸ್ಟ್ ಪದಾ ರ್ಪಣೆ ಮಾಡಿದ್ದು 1978ರ ಪ್ರವಾಸಿ ಆಸ್ಟ್ರೇಲಿಯ ತಂಡದ ಆಗಮನದ ವೇಳೆ. 19 ಟೆಸ್ಟ್, 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಮಾರ್ಷಲ್, ಹೋಲ್ಡಿಂಗ್ ಮೊದ ಲಾದ ವೇಗಿಗಳ ಎಸೆತಗಳನ್ನು ಯಶಸ್ವಿಯಾಗಿ ಗ್ಲೌಸ್ಗೆ ಸೇರಿಸಿಕೊಳ್ಳುತ್ತಿದ್ದ ಹೆಗ್ಗಳಿಕೆ ಮರ್ರೆ ಅವರದಾಗಿತ್ತು.
ಆದರೆ 13ನೇ ವಯಸ್ಸಿನಲ್ಲೇ ಅಂಟಿಕೊಂಡ ಮರಿಜುವಾನಾ ಚಟ, 1983ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಂಡುಕೋರನಾಗಿ ತೆರಳಲು ದೊಡ್ಡ ಮೊತ್ತ ಪಡೆದದ್ದೆಲ್ಲ ಮರ್ರೆ ಅವರ ಕ್ರಿಕೆಟ್ ಬದುಕನ್ನು ಬಹಳ ಬೇಗ ಮೊಟಕುಗೊಳಿಸಿತು.