Advertisement

ರಫೆಲ್‌: “ಫಾರೆನ್ಸಿಕ್‌ ಆಡಿಟ್‌’ಗೆ ಆಗ್ರಹ

06:00 AM Aug 30, 2018 | Team Udayavani |

ಬೆಂಗಳೂರು: ಫ್ರಾನ್ಸ್‌ನೊಂದಿಗಿನ ರಫೆಲ್‌ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಬಗ್ಗೆ ಮಹಾಲೇಖಪಾಲರಿಂದ “ಫಾರೆನ್ಸಿಕ್‌ ಆಡಿಟ್‌’ (ವಂಚನೆ, ಆರ್ಥಿಕ ದುರ್ಬಳಕೆಯ ಮೌಲ್ಯಮಾಪನ) ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಫೆಲ್‌ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ ಅವರು, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದದಂತೆ 126 ರಫೆಲ್‌ ಯುದ್ದ ವಿಮಾನಕ್ಕೆ 90,000 ಕೋಟಿ ರೂ. ವೆಚ್ಚದ ಅಂದಾಜು ಇತ್ತು. ನಂತರದ ಒಪ್ಪಂದದಂತೆ 36 ಯುದ್ದ ವಿಮಾನ ಖರೀದಿಗೆ 60,000 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ ಎಂದು ಹಿಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದ್ದರು. ಮೇಲ್ನೋಟಕ್ಕೆ ಈ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಿಎಜಿ ವತಿಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಹೇಳಿದರು.

ಹಗರಣದ ತನಿಖೆಯನ್ನು ಕಾಂಗ್ರೆಸ್‌ ಜಂಟಿ ಸದನ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸುತ್ತಿದೆ. ಒಂದೊಮ್ಮೆ ಜಂಟಿ ಸದನ ಸಮಿತಿಗೆ ವಹಿಸಿದರೆ ಅದು ನೀಡುವ ವರದಿಗೆ ಸಂಸತ್ತಿನ ಎರಡೂ ಸದನ ಅನುಮೋದಿಸಬೇಕಾಗುತ್ತದೆ. ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಆಗ ಅನುಮೋದನೆಯಾಗದಿದ್ದರೆ ನಂತರ ಇಡೀ ದೇಶ ಲೋಕಸಭಾ ಚುನಾವಣೆಯತ್ತ ಹೊರಳಲಿದೆ. ಹಾಗಾಗಿ ಸತ್ಯಾಂಶ ಹೊರಬರಲಾರದೆ ಹೋಗಬಹುದು. ಆ ಹಿನ್ನೆಲೆಯಲ್ಲಿ ಸಿಎಜಿ ವತಿಯಿಂದ “ಫಾರೆನ್ಸಿಕ್‌ ಆಡಿಟ್‌’ಗೆ ಸೂಚಿಸಿ ಡಿ.31ರೊಳಗೆ ವರದಿ ಪಡೆದರೆ ಸತ್ಯಾಂಶ ಗೊತ್ತಾಗಲಿದೆ ಎಂದು ಅಭಿಪ್ರಾಯಪಟ್ಟರು.

“ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯು ಖಾಲಿ ಘೋಷಣೆಯಂತಿದೆ. “ಮೇಕ್‌ ಇಂಡಿಯಾ’ಗೆ ಆದ್ಯತೆ ನೀಡಿದರೆ ಕ್ರಮೇಣ ಮೇಕ್‌ ಇನ್‌ ಇಂಡಿಯಾ ಸಾಧ್ಯವಾಗಲಿದೆ. ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಜಾರಿ ವೇಳೆ “ಮೇಕ್‌ ಇಂಡಿಯಾ’ಗೆ ಚಾಲನೆ ನೀಡಲಾಗಿತ್ತು. ಈಗ ಮೇಕ್‌ ಇನ್‌ ಇಂಡಿಯಾ ಎಂಬುದು ಹೆಸರಿಗಷ್ಟೇ ಎಂಬಂತಾಗಿದ್ದು, ದೇಶೀಯ ಎಚ್‌ಎಎಲ್‌ ಕಂಪೆನಿಯನ್ನೇ ಕಡೆಗಣಿಸಲಾಗಿದೆ ಎಂದು ದೂರಿದರು. 

ಐದು ಮಂದಿ ಹೋರಾಟಗಾರರ ಬಂಧನ ಖಂಡನೀಯ
ದೇಶದ ನಾನಾ ಕಡೆ ಮಂಗಳವಾರ ಐದು ಮಂದಿ ಹೋರಾಟಗಾರರನ್ನು  ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಿರುವುದರ ಸಂಕೇತವಾಗಿದ್ದು, ಇದರ ವಿರುದ್ಧ ದೇಶದ ಜನ ಹೋರಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಯಶವಂತ್‌ ಸಿನ್ಹಾ ಹೇಳಿದ್ದಾರೆ.

Advertisement

ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದ್ದು, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮವಿರುದ್ಧ ಮಾತನಾಡುವವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಐಟಿ ಇತರ ಸಂಸ್ಥೆಗಳಿಂದ ದಾಳಿ ನಡೆಸಿ ಜೈಲಿಗೆ ಕಳುಹಿಸುವ ಪ್ರಯತ್ನವೂ ನಡೆಯುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸುವುದು, ತುರ್ತು ಪರಿಸ್ಥಿತಿಯ ವಾತಾವರಣವನ್ನು ಖಂಡಿಸಿ ನಾನು ಬಿಜೆಪಿ ತೊರೆದೆ. ನಾನು ಮಾಡುವ ಆರೋಪಗಳನ್ನು ವೈಯಕ್ತಿಕ ಕಾರಣಕ್ಕೆ ದೂರಲಾಗುತ್ತಿದೆ ಎಂಬಂತೆ ಬಿಂಬಿಸುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಆದರೆ ನಾನು ಪ್ರಸ್ತಾವಿಸುವ ವಿಚಾರಗಳಿಗೆ ಉತ್ತರ ನೀಡುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next