Advertisement
ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ. ಇವರ ಪತ್ನಿ ರೇಖಾ 2013ರಲ್ಲಿ ನಿಧನರಾಗಿದ್ದರು. ರೈಗೆ ಇಬ್ಬರು ಗಂಡು ಮಕ್ಕಳು ರಾಖಿ ಮತ್ತು ರಿಕ್ಕಿ. ರೈ ಹಿರಿಯ ಪುತ್ರ ಕೆನಡಾದಲ್ಲಿ ವಾಸ್ತವ್ಯ ಹೂಡಿದ್ದು, ಕೋವಿಡ್ ಲಾಕ್ ಡೌನ್ ನಿಂದಾಗಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ. 2ನೇ ಪುತ್ರ ರಿಕ್ಕಿ ತಂದೆ ಜತೆ ಇದ್ದಾರೆ.
ಬಿಕಾಂ ಪದವೀಧರ ಮುತ್ತಪ್ಪ ರೈ ಆರಂಭದಲ್ಲಿ ವಿಜಯ ಬ್ಯಾಂಕ್ ಉದ್ಯೋಗಿ. ನಂತರ ಭೂಗತಲೋಕಕ್ಕೆ ಕಾಲಿಟ್ಟಿದ್ದ ರೈ 1970-80ರ ದಶಕದಲ್ಲಿ ಭೂಗತ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು, ರೈ ಹಾಗೂ ಸಹಚರರು ಅಂದಿನ ಕುಖ್ಯಾತ ಡಾನ್ ಜಯರಾಜ್ ಹತ್ಯೆ ಪ್ರಕರಣದಲ್ಲಿ ಭಾಗಿ. ಬಳಿಕ ಮುತ್ತಪ್ಪ ರೈ ಹತ್ಯೆಗೆ ಸಂಚು ನಡೆಯುತ್ತಿತ್ತು ಎಂಬ ಸುದ್ದಿಯಿಂದ ಭಾರತ ಬಿಟ್ಟು ದುಬೈಗೆ ರೈ ಶಿಫ್ಟ್ ಆಗಿದ್ದರು. ದುಬೈನಲ್ಲೇ ಕುಳಿತು ಭೂಗತ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೈಯನ್ನು ರಿಯಲ್ ಎಸ್ಟೇಟ್ ನ ಸುಬ್ಬಾರಾಜು ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ರೈ ವಿರುದ್ಧ ವಾರಂಟ್ ಜಾರಿಗೊಳಿಸಿದ್ದರು. ಒಟ್ಟು ರೈ ವಿರುದ್ಧ ಎಂಟು ಪ್ರಕರಣಗಳಿದ್ದವು. ಕೊನೆಗೆ 2002ರಲ್ಲಿ ಮುತ್ತಪ್ಪ ರೈಯನ್ನು ದುಬೈ ಪೊಲೀಸರು ಯುಎಇನಿಂದ ಭಾರತಕ್ಕೆ ಗಡಿಪಾರು ಮಾಡಿದ್ದರು.
Related Articles
Advertisement
ಈ ವೇಳೆ ಮುತ್ತಪ್ಪ ರೈಯನ್ನು ಸಿಬಿಐ, ಭಾರತದ ರಾ (ರಿಸರ್ಚ್ ಆ್ಯಂಡ್ ಅನಾಲಿಸೀಸ್ ವಿಂಗ್) ಮತ್ತು ಇಂಟೆಲಿಜೆನ್ಸ್ ಬ್ಯೂರೋ ವಿಚಾರಣೆ ನಡೆಸಿತ್ತು. ಆದರೆ ರೈ ವಿರುದ್ಧದ ವಸೂಲಿ ರಾಕೆಟ್, ಹತ್ಯೆ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೋರ್ಟ್ ರೈಯನ್ನು ಖುಲಾಸೆಗೊಳಿಸಿತ್ತು. ನಂತರ ಜಯಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿದ್ದ ಮುತ್ತಪ್ಪ ರೈ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.