ನವದೆಹಲಿ: ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮತ್ತು ಮಹಿಳಾ ಟಿ20 ತಂಡದ ಪ್ರಪ್ರಥಮ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ಗುಡ್ ಬೈ ಹೇಳಿದ್ದಾರೆ. ಮಿಥಾಲಿ ರಾಜ್ ಅವರು 32 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು ಮತ್ತು ಮೂರು ಟಿ20 ವಿಶ್ವಕಪ್ ಗಳಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಮಿಥಾಲಿ ರಾಜ್ ಅವರದ್ದಾಗಿದೆ.
2006ರಲ್ಲಿ ಡರ್ಬಿಯಲ್ಲಿ ಭಾರತ ಮಹಿಳಾ ತಂಡವು ತನ್ನ ಪ್ರಪ್ರಥಮ ಟಿ20 ಪಂದ್ಯವನ್ನಾಡಿದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಮಿಥಾಲಿ ರಾಜ್ ಅವರದ್ದಾಗಿದೆ. ವಿಥಾಲಿ ಅವರು ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಇಂಗ್ಲಂಡ್ ವಿರುದ್ಧ ಆಡಿದ್ದರು ಮತ್ತು ಈ ಪಂದ್ಯದಲ್ಲಿ ಅವರು 30 ರನ್ ಗಳಿಸಿ ಔಟಾಗದೇ ಉಳಿದಿದ್ದರು.
2006ರಿಂದ ಸತತವಾಗಿ ಭಾರತ ಮಹಿಳಾ ಟಿ20 ತಂಡದಲ್ಲಿ ಆಡುತ್ತಾ ಬಂದಿದ್ದೇನೆ ಇನ್ನು 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ಟಿ20 ಮಾದರಿಯಿಂದ ನಿವೃತ್ತಿಯಾಗುತ್ತಿದ್ದೇನೆ. ನನ್ನ ದೇಶಕ್ಕೆ ವಿಶ್ವಕಪ್ ಒಂದನ್ನು ಗೆಲ್ಲಿಸಿಕೊಡುವುದು ನನ್ನ ಕನಸಾಗಿದ್ದು ಇದಕ್ಕಾಗಿ ನಾನು ಪರಿಪೂರ್ಣ ಪ್ರದರ್ಶನವನ್ನು ನೀಡುವುದು ಅಗತ್ಯವಾಗಿದೆ ಎಂದು ಮಿಥಾಲಿ ರಾಕ್ ಅವರು ತನ್ನ ವಿದಾಯಕ್ಕೆ ಸಮರ್ಥನೆಯನ್ನು ನೀಡಿದ್ದಾರೆ.
ತವರಿನಂಗಳದಲ್ಲಿ ನಡೆಯಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ತಾನು ಆಯ್ಕೆಗೆ ಲಭ್ಯ ಇರುವುದಾಗಿ ಮಿಥಾಲಿ ಅವರು ಇತ್ತೀಚೆಗಷ್ಟೇ ಆಯ್ಕೆ ಮಂಡಳಿಗೆ ತಿಳಿಸಿದ್ದರು. ಆದರೆ ತಂಡದ ಆಯ್ಕೆಗೆ ಇನ್ನು ಎರಡು ದಿನ ಬಾಕಿ ಇರುವಂತೆ ಮಿಥಾಲಿ ರಾಜ್ ಅವರು ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ.
ಮಿಥಾಲಿ ರಾಜ್ ಅವರು ಇದುವರೆಗೆ 89 ಪಂದ್ಯಗಳನ್ನಾಡಿದ್ದು 2364 ರನ್ನುಗಳನ್ನು ಬಾರಿಸಿದ್ದಾರೆ. ಇದರಲ್ಲಿ 17 ಅರ್ಧಶತಕಗಳಿವೆ. ಟಿ20ಯಲ್ಲಿ ಮಿಥಾಲಿ ಅವರ ಬೆಸ್ಟ್ ಸ್ಕೋರ್ ಔಟಾಗದೇ 97 ರನ್ನುಗಳು. ಮಿಥಾಲಿ ರಾಜ್ ಅವರು 32 ಟಿ20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದ್ದಾರೆ. 2012, 2014 ಮತ್ತು 2016ರ ಟಿ20 ವಿಶ್ವಕಪ್ ಗಳಲ್ಲಿ ಮಿಥಾಲಿ ರಾಜ್ ಅವರು ಭಾರತ ತಂಡದ ನಾಯಕಿಯಾಗಿದ್ದರು.