ಹೊಸದಿಲ್ಲಿ: ದೇಶದ ಮೊದಲ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲಕ್ಕೆ ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಸಹಿ ಹಾಕಿದ್ದಾರೆ. ಸಶಸ್ತ್ರ ಸೀಮಾ ಬಲದ ನಿವೃತ್ತ ಮುಖ್ಯಸ್ಥ ಅರ್ಚನಾ ರಾಮಚಂದ್ರನ್, ಮಹಾರಾಷ್ಟ್ರದ ನಿವೃತ್ತ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಹೇಂದ್ರ ಸಿಂಗ್ ಮತ್ತು ಇಂದ್ರಜಿತ್ ಪ್ರಸಾದ್ ಗೌತಮ್‌ರನ್ನು ಲೋಕಪಾಲದ ನ್ಯಾಯಾಂಗೇತರ ಕ್ಷೇತ್ರದ ಸದಸ್ಯರನ್ನಾಗಿ ನೇಮಿಸಲಾಗಿದೆ. ನ್ಯಾಯಾಂಗದ ವತಿಯಿಂದ ಮಣಿಪುರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಮತ್ತು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿಲೀಪ್ ಭೋಸ್ಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಜಯ ಕುಮಾರ್ ತ್ರಿಪಾಠಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರತಿನಿಧಿ ನ್ಯಾ.ಎಸ್.ಎ.ಬೋಬೆx ಮತ್ತು ಕಾನೂನು ತಜ್ಞ ಮುಕುಲ್ ರೋಹಟಗಿ ನೇತೃತ್ವದ ಸಮಿತಿ ಕಳೆದ ವಾರದ ಸಭೆಯಲ್ಲಿ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿತ್ತು.