ಮುಂಬಯಿ: ಬಹುಭಾಷಾ ನಟಿ ನಯನತಾರಾ ಅಭಿನಯದ ʼಅನ್ನಪೂರ್ಣಿʼ ಸಿನಿಮಾ ಇತ್ತೀಚೆಗೆ ತೆರೆಕಂಡು, ಇದೀಗ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ನಡುವೆ ಸಿನಿಮಾದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದೆ.
ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ನಯನತಾರಾ ಅವರ ಇತ್ತೀಚಿನ ಚಿತ್ರ ʼಅನ್ನಪೂರ್ಣಿʼ ಸಿನಿಮಾದ ನಿರ್ಮಾಪಕರ ವಿರುದ್ಧ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಿರ್ಮಾಪಕರು ರಾಮನನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿ, ʼಅನ್ನಪೂರ್ಣಿʼ ಸಿನಿಮಾವನ್ನು ಹಿಂದೂ ವಿರೋಧಿ,ಸಿನಿಮಾ ಲವ್ ಜಿಹಾದ್ ನ್ನು ಉತ್ತೇಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
“ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ಜಗತ್ತು ಸಂಭ್ರಮಿಸುತ್ತಿರುವ ಈ ಸಮಯದಲ್ಲಿ, ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಚಲನಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್ ಮಾಡುತ್ತಾಳೆ.ಈ ಚಿತ್ರದಲ್ಲಿ ಲವ್ ಜಿಹಾದ್ ನ್ನು ಪ್ರಚಾರ ಮಾಡಲಾಗಿದೆ. ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸ ತಿನ್ನುವವರಾಗಿದ್ದರು ಎಂದು ಹೇಳಿ ಮಾಂಸ ತಿನ್ನಲು ನಟಿಯನ್ನು ಮನವೊಲಿಸುವ ದೃಶ್ಯಗಳಿವೆ” ಎಂದು ಸೋಲಂಕಿ ಬರೆದಿದ್ದಾರೆ.
ಈ ಕುರಿತುಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಮತ್ತು ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಹಿಂದಿ ಐಟಿ ಸೆಲ್‌ನ ಸಂಸ್ಥಾಪಕರೂ ಆಗಿರುವ ಸೋಲಂಕಿ, ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನೀಲೇಶ್ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಹೆಡ್ ಮೋನಿಕಾ ಶೆರ್ಗಿಲ್. ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸದ್ಯ ʼಅನ್ನಪೂರ್ಣಿʼ ಚಿತ್ರತಂಡ ಇದುವರೆಗೆ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.
;