ಗಾಂಧಿನಗರ: ಊರಿನ ದೊಡ್ಡ ಕುಟುಂಬದ ಮದುವೆಯಿದ್ದರೆ ನಾವು ಮೊದಲು ಹೊಟ್ಟೆ ತುಂಬ ಊಟ ಮಾಡಿ ಬರುತ್ತೇವೆ. ಊಟದ ಕೌಂಟರ್ ಗೆ ಹೋಗಿ ಊಟ ಮಾಡಿದ ಬಳಿಕ ಐಸ್ ಕ್ರೀಂ, ತಂಪು ಪಾನೀಯ ಸೇವಿಸಿ ಮನೆಗೆ ಬರುತ್ತೇವೆ. ಆದರೆ ನೀವು ಹೋಗುವ ಮದುವೆಯಲ್ಲಿ ನೋಟುಗಟ್ಟಲೇ ಹಣ ಸಿಕ್ಕರೆ ಏನು ಮಾಡುತ್ತೀರಿ? ಸಿಕ್ಕಿದ್ದೇ ಚಾನ್ಸ್ ಎಂದು ತೆಗೆದುಕೊಳ್ಳುತ್ತೀರಿ ಅಲ್ವಾ?
ಇದೇ ರೀತಿಯ ಘಟನೆಯೊಂದು ಗುಜರಾತಿನ ಮೆಹ್ಸಾನಾ ಜಿಲ್ಲೆಯ ಕೇಕ್ರಿ ತಹಸಿಲ್‌ನಲ್ಲಿರುವ ಅಗೋಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಜಿ ಸರಪಂಚ್ ವೊಬ್ಬರು ತಮ್ಮ ಸಂಬಂಧಿಯ (ಸೋದರಳಿಯ) ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಊರಿನ ಸಮಸ್ತರನ್ನು ಕರೆದು ಊಟ ಹಾಕಿದ್ದಾರೆ.
ಇಷ್ಟು ಮಾತ್ರವಾಗಿದ್ದರೆ ಆ ಮದುವೆಯನ್ನು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಮದುವೆ ಕಾರ್ಯಕ್ರಮದಲ್ಲಿ ಮನೆಯ ಮುಂಭಾಗದಲ್ಲಿ ನೆರೆದಿದ್ದ ಅಪಾರ ಜನರತ್ತ ಕರೀಂ ಯಾದವ್ ( ಮಾಜಿ ಸರಪಂಚ್) 500 ರೂ. ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ. ಕಂತೆಗಟ್ಟಲೇ ನೋಟುಗಳನ್ನು ಜನರತ್ತ ಎಸೆದಿದ್ದಾರೆ. ಜನರು ನೋಟಿನ ಮಳೆಯನ್ನು ನೋಡುತ್ತಾ, ನಾ ಮುಂದು – ತಾ ಮುಂದು ಎನ್ನುವಂತೆ ನೋಟುಗಳನ್ನು ಹೆಕ್ಕಿದ್ದಾರೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಹಲವು ರೀಲ್ಸ್ ಗಳು ಹರಿದಾಡುತ್ತಿದೆ.