Advertisement
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
Related Articles
Advertisement
ಅವರು ರಾಷ್ಟ್ರಪತಿಯಾಗಿದ್ದಾಗಲೂ ಎಲ್ಲರ ಒಮ್ಮತಕ್ಕೆ ಮನ್ನಣೆ ನೀಡುತ್ತಿದ್ದರು. ರಾಷ್ಟ್ರಪತಿಯಾಗಿದ್ದಾಗ ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೇನೆ. ಪ್ರತೀಬಾರಿ ಹೋದಾಗಲೂ ಮೊದಲು ನಿಮ್ಮ ಆರೋಗ್ಯ ಹೇಗಿದೆ ಎಂದು ಪ್ರೀತಿಯಿಂದ ಕೇಳುತ್ತಿದ್ದರು. ರಾಷ್ಟ್ರಪತಿಗಳಾಗಿ ಅವರು ನಿಜಕ್ಕೂ ಆ ಹುದ್ದೆಯ ಘನತೆ-ಗೌರವ ಹೆಚ್ಚಿಸಿದರು.ವೈಯಕ್ತಿಕವಾಗಿಯೂ ನಾನು ಅವರನ್ನು ಬಹಳ ಹತ್ತಿರದಿಂದ ಬಲ್ಲೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳು ಜನಪರ ಕಾಳಜಿಗೆ ಸಾಕ್ಷಿಯಾಗಿದ್ದವು. ಪ್ರಣವ್‌ರನ್ನು ಭೇಟಿಯಾದಾಗಲೆಲ್ಲಾ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದ್ದದ್ದು ಸಹಜವಾಗಿತ್ತು.
ಜನಸಾಮಾನ್ಯರು, ಕೃಷಿಕರು, ಮಹಿಳೆಯರು, ಯುವಸಮೂಹದ ಬಗ್ಗೆ ಅವರ ಕಾಳಜಿ ಅಸಾಧಾರಣ. ವಿತ್ತಸಚಿವರಾಗಿದ್ದಾಗ ದೇಶದ ಆರ್ಥಿಕತೆ ಹಳಿತಪ್ಪದಂತೆ ಬಹಳ ಜಾಣ್ಮೆಯಿಂದ ಕಾರ್ಯನಿರ್ವಹಿಸಿದ್ದರು. ಈ ಜಾಣ್ಮೆ ದೇಶದ ಹಿತಕ್ಕೆ ಅನಿವಾರ್ಯವೂ ಆಗಿತ್ತು. ನಮ್ಮಿಬ್ಬರದ್ದೂ ಬೇರೆ ಬೇರೆ ಪಕ್ಷ. ಆದರೆ ಅವರು ಇದಕ್ಕೆಲ್ಲ ಗಮನವೇ ಕೊಡುತ್ತಿರಲಿಲ್ಲ. ವೈಯಕ್ತಿಕ ಸಂಬಂಧವನ್ನೇ ಅವರು ವಿಶೇಷವಾಗಿ ಪರಿಗಣಿಸುತ್ತಿದ್ದರು. ನಾಯಕನಿಗಿರಬೇಕಾದ ಮುಖ್ಯಗುಣವಿದು. ಕರ್ನಾಟಕದ ಬಗ್ಗೆಯೂ ಅವರಿಗೆ ಅತೀವ ಕಾಳಜಿಯಿತ್ತು. ಇಲ್ಲಿನ ಹಲವಾರು ನಾಯಕರ ಜತೆ ಒಡನಾಟವೂ ಇತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಸೋಲು ಅನುಭವಿಸಿದ್ದಾಗ, ನನ್ನ ಜತೆ ಮಾತನಾಡಿದ್ದರು. ಸಾಂತ್ವನ ಹೇಳಿದ್ದರು ಮಾತ್ರವಲ್ಲ, ಬಹಳ ನೊಂದುಕೊಂಡಿದ್ದರು. ಪ್ರತೀವರ್ಷ ದುರ್ಗಾಪೂಜೆಗೆ ಅವರ ಊರಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ದೇವರು ಪೂರ್ವಿಕರಿಂದ ಬಳುವಳಿಯಾಗಿ ಬಂದ ಆಚಾರಗಳ ಬಗ್ಗೆ ಅಗಾಧ ನಂಬಿಕೆ ಹೊಂದಿದ್ದರು. ಅವರದು ಆಕರ್ಷಕ ವ್ಯಕ್ತಿತ್ವ ಸರಳ ಜೀವನ. ದೇಶ ಹಾಗೂ ಜಗತ್ತಿನ ವಿದ್ಯಮಾನಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಜ್ಞಾನಿ. ಅವರ ಹೆಸರನ್ನು ಭಾರತೀಯ ರಾಜಕಾರಣ ಮರೆಯಲು ಸಾಧ್ಯವೇ ಇಲ್ಲ. ಅವರನ್ನು ಕಳೆದುಕೊಂಡು ರಾಷ್ಟ್ರ ಬಡವಾಗಿದೆ, ದುಃಖತಪ್ತವಾಗಿದೆ. ಅಂತಹ ಮುತ್ಸದ್ದಿಗಳು ಅತಿ ವಿರಳ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿಯೂ ತುಂಬಾ ನಷ್ಟವುಂಟುಮಾಡಿದೆ.