ಹೊಸದಿಲ್ಲಿ/ನಾಗ್ಪುರ: ನಾಗ್ಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಒಪ್ಪಿರುವುದು ಕಾಂಗ್ರೆಸ್‌ನಲ್ಲಿ ಅಚ್ಚರಿ ಮೂಡಿಸಿದೆ. ಸಂಘಟನೆಯ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಭಾಗವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ “ಪ್ರಣವ್ ಅವರನ್ನೇ ಕೇಳಿ’ ಎಂದು ಹೇಳಿದ್ದಾರೆ.
ಜೂ. 7ರಂದು ನಾಗ್ಪುರದಲ್ಲಿ ನಡೆಯುವ ಆರ್‌ಎಸ್‌ಎಸ್‌ನ ತೃತೀಯ ವರ್ಷದ ಶಿಬಿರಾರ್ಥಿಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ಮುಖ್ಯ ಅತಿಥಿಯಾಗಲು ಒಪ್ಪಿಕೊಂಡಿದ್ದಾರೆ. ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಣ ವಾಗಿದ್ದು, ರಾಷ್ಟ್ರೀಯವಾದದ ಕುರಿತು ಅವರು ಮಾತನಾಡಲಿದ್ದಾರೆ. ಮತ್ತೂಂದು ಕುತೂಹಲಕಾರಿ ಅಂಶವೆಂದರೆ, ಮುಖರ್ಜಿ ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕನಿಷ್ಠ ನಾಲ್ಕು ಬಾರಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರನ್ನು ಭೇಟಿಯಾಗಿದ್ದಾರೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ಪ್ರತಿಕ್ರಿಯಿಸಲು ನಕಾರ: ಆರ್‌ಎಸ್‌ಎಸ್ ಆಹ್ವಾನ ಪ್ರಣವ್ ಒಪ್ಪಿರುವುದು ಕಾಂಗ್ರೆಸ್‌ನಲ್ಲಿ ಇರುಸು ಮುರುಸಿಗೆ ಕಾರಣವಾಗಿದ್ದು, ಕೆಲವು ನಾಯಕರಂತೂ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪಕ್ಷದ ವಕ್ತಾರ ಟಾಮ್ ವಡಕ್ಕನ್ ಬಳಿ ಪ್ರತಿಕ್ರಿಯೆ ಕೇಳಿದಾಗ “ಪ್ರಣವ್‌ರನ್ನೇ ಕೇಳಿ’ ಎಂದು ಹೇಳಿದ್ದು, “ಕಾಂಗ್ರೆಸ್ ತತ್ವ-ಸಿದ್ಧಾಂತಗಳಿಗೂ, ಆರೆಸ್ಸೆಸ್ ನಿಲುವುಗಳಿಗೂ ಬಹಳಷ್ಟು ವ್ಯತ್ಯಾಸವಿದೆ’ ಎಂದಿದ್ದಾರೆ. ಇದೇ ವೇಳೆ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅಭಿಪ್ರಾಯವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
2010ರಲ್ಲಿ ಬುರಾರಿಯಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಭಯೋತ್ಪಾದಕರಿಗೂ ಆರ್‌ಎಸ್‌ಎಸ್ ಮತ್ತು ಇತರ ಸಂಘ ಪರಿವಾರಗಳಿಗೆ ಲಿಂಕ್ ಇದೆ ಎಂದು ಹೇಳಲಾಗಿರುವ ಬಗ್ಗೆ ತನಿಖೆ ನಡೆಸಬೇಕು ಎಂಬ ರಾಜಕೀಯ ನಿರ್ಣಯವನ್ನು ಅವರೇ ಮಂಡಿಸಿದ್ದರು ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ, “ಮುಖರ್ಜಿ ಬುದ್ಧಿವಂತರು. ಅವರು ಜಾತ್ಯತೀತ ಮನಃಸ್ಥಿತಿಯವರು. ಅವರು ತಮ್ಮ ನಿಲುವು ಬದಲಿಸಲಿಕ್ಕಿಲ್ಲ’ ಎಂದಿದ್ದಾರೆ.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣವ್ ಪಾಲ್ಗೊಳ್ಳುವಿಕೆ ರಾಜಕೀಯ ಅಸ್ಪೃಶ್ಯತೆ ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ. ಆರೆಸ್ಸೆಸ್ ಪಾಕಿಸ್ಥಾನದ ಐಎಸ್‌ಐ ಅಲ್ಲ, ಅದೊಂದು ರಾಷ್ಟ್ರೀಯವಾದಿಗಳ ಸಂಘಟನೆ.
– ನಿತಿನ್ ಗಡ್ಕರಿ, ಕೇಂದ್ರ ಸಾರಿಗೆ ಸಚಿವ