Advertisement

ಬಿಜೆಪಿ ಸೇರಿದ ಮಾಜಿ ಸಂಸದ ವಿಜಯ ಶಂಕರ್‌

11:24 PM Nov 05, 2019 | Team Udayavani |

ಬೆಂಗಳೂರು: ಮಾಜಿ ಸಂಸದ ಸಿ.ಎಚ್‌.ವಿಜಯ ಶಂಕರ್‌ ಅವರು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್‌ ತೊರೆದು ಮಾತೃಪಕ್ಷಕ್ಕೆ ಬಂದಿರುವ ವಿಜಯಶಂಕರ್‌ ಅವರಿಗೆ ನಳಿನ್‌ ಕುಮಾರ್‌ ಕಟೀಲು ಹಾಗೂ ಯಡಿಯೂರಪ್ಪ ಅವರು ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು.

Advertisement

ನಂತರ ಯಡಿಯೂರಪ್ಪ ಮಾತನಾಡಿ, ವಿಜಯ ಶಂಕರ್‌ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು. ಕಾಂಗ್ರೆಸ್‌ ಪಕ್ಷ ಮುಳುಗುತ್ತಿದ್ದು, ಈಗ ಉಳಿದಿರುವುದು ಬಿಜೆಪಿ ಮಾತ್ರ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವಿಂದು ವಿಶ್ವದಲ್ಲೇ ಗುರುತಿಸುವಂತಹ ಪರಿವರ್ತನೆ ಕಾಣುತ್ತಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸರಳ ಸಜ್ಜನಿಕೆಯ ಸಿ.ಎಚ್‌.ವಿಜಯಶಂಕರ್‌ ಅವರು ಮಹತ್ವದ ಕಾಲಘಟದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ. ಕೆಲವೊಂದು ಕಾರಣಗಳಿಂದ ಅವರು ಬೇರೊಂದು ಪಕ್ಷಕ್ಕೆ ಹೋಗಿದ್ದು, ರಾಷ್ಟ್ರೀಯ ಹಿತದ ದೃಷ್ಟಿಯಿಂದ ಬಿಜೆಪಿ ವಿಚಾರಧಾರೆಯೇ ಒಳಿತು ಎಂಬ ತೀರ್ಮಾನದೊಂದಿಗೆ ಬಿಜೆಪಿಗೆ ಮರಳಿದ್ದಾರೆ ಎಂದರು.

ಸಿ.ಎಚ್‌.ವಿಜಯ ಶಂಕರ್‌ ಮಾತನಾಡಿ, ವೈಯಕ್ತಿಕ ಕಾರಣಗಳಿಂದ ಪಕ್ಷ ತೊರೆದಿದ್ದು, ಬಿಜೆಪಿಯು ಅತ್ಯುತ್ತಮ ಸಂಘಟನೆಯಾದ್ದರಿಂದ ಈಗ ಮತ್ತೆ ಪಕ್ಷ ಸೇರುತ್ತಿದ್ದೇನೆ. ಶಾಲಾ ದಿನಗಳಿಂದಲೂ ತಾವು ಸ್ವಯಂಸೇವಕರಾಗಿದ್ದು, ಅಂದಿನಿಂದಲೂ ಶಿಸ್ತಿನ ಸಿಪಾಯಿಯಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ದೇಶ ಮತ್ತು ಧರ್ಮದ ವಿಚಾರದಲ್ಲಿ ತಾವು ಎಂದೂ ರಾಜಿಯಾಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next