ಬೆಂಗಳೂರು:ಚಿತ್ರ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಸ್ಪಂದನ) ಒಂದಿಲ್ಲೊಂದು ವಿವಾದಗಳನ್ನು ನಿರಂತರವಾಗಿ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಈಗ ಎಐಸಿಸಿ ಸೊಸಿಯಲ್ ಮೀಡಿಯಾ ಮುಖ್ಯಸ್ಥೆಯಾಗಿರುವ ಅವರು ಟ್ವಿಟ್ಟರ್ ಖಾತೆಯಿಂದ ತಮ್ಮ ಹುದ್ದೆಯನ್ನು ಡಿಲೀಟ್ ಮಾಡಿ ಮತ್ತೆ ಸೇರ್ಪಡೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ.
ಈ ಗೊಂದಲದ ಹಿಂದೆ ರಮ್ಯಾ ಅವರಿಗೆ ನಿರ್ಧಿಷ್ಟ ಕಾರಣ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ. ರಮ್ಯಾ ಸೋಸಿಯಲ್ ಮೀಡಿಯಾ ಮುಖ್ಯಸ್ಥೆಯಾದ ಮೇಲೆ ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿ ಪಕ್ಷಕ್ಕೂ ಸಾಕಷ್ಟು ಮುಜುಗರ ಉಂಟಾಗುವಂತೆ ಮಾಡಿದ್ದರು. ಅವರ ವರ್ತನೆಯಿಂದ ಅನೇಕ ನಾಯಕರು ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನು “ಚೋರ್’ ಎಂದು ಕರೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಈ ಬೆಳವಣಿಗೆ ನಂತರ ರಮ್ಯಾ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿರದೇ ದೂರ ಉಳಿದಿದ್ದರು. ಅಲ್ಲದೆ ಪಕ್ಷದ ಪರವಾಗಿ ಹಾಗೂ ಮೋದಿ ವಿರುದ್ಧವೂ ಯಾವುದೇ ಟ್ವೀಟ್ ಮಾಡದೇ ದೂರ ಉಳಿದಿದ್ದರು. ಬುಧವಾರ ಏಕಾಏಕಿ ತಮ್ಮ ಟ್ವಿಟ್ಟರ್ ಖಾತೆಯ ತಮ್ಮ ವಿವರ ಜಾಗದಲ್ಲಿರುವ ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಪಕ್ಷದ ಸೋಸಿಯಲ್ ಮಿಡಿಯಾ ಮುಖ್ಯಸ್ಥೆ ಎನ್ನುವ ಯನ್ನುವ ವಿವರವನ್ನು ತೆಗೆದುಹಾಕಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಮ್ಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.
ನಿಖೀಲ್ ಆಳ್ವಾ ಜೊತೆ ಮುನಿಸು: ರಮ್ಯಾ ಸೊಸಿಯಲ್ ಮಿಡಿಯಾ ಮುಖ್ಯಸ್ಥೆಯಾಗಿ ಅವಾಂತರಗಳನ್ನು ಮಾಡಿಕೊಳ್ಳುತ್ತಿರುವುದಕ್ಕೆ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿರುವ ನಿಖೀಲ್ ಆಳ್ವಾ ಆಕ್ಷೇಪ ಎತ್ತಿತ್ತಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ ರಮ್ಯಾಗೆ ಎಐಸಿಸಿಯಲ್ಲಿ ಸೂಕ್ತ ಬೆಂಬಲ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸತ್ತು ರಮ್ಯಾ ರಾಜೀನಾಮೆಗೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.
ಆಳ್ವಾಗೆ ಹೊಣೆ ?: ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಪುತ್ರ ನಿಖೀಲ್ ಆಳ್ವಾ ಅವರು ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ರಾಹುಲ್ ಗಾಂಧಿಯ ಪ್ರವಾಸ, ಭಾಷಣ ಮುಂತಾದವುಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಈಗ ರಮ್ಯಾ ಸೋಸಿಯಲ್ ಮೀಡಿಯಾ ಮುಖ್ಯಸ್ಥೆಯ ಹುದ್ದೆಗೆ ರಾಜೀನಾಮೆ ನೀಡಿದರೆ, ನಿಖೀಲ್ ಆಳ್ವಾಗೆ ಆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.