ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ ಅವರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ಸೇರಿ ತುಮಕೂರಿನ ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿ ಮಾತೃ ಪಕ್ಷಕ್ಕೆ ಮರಳಿದರು.
ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಮುದ್ದಹನುಮೇಗೌಡ ”ಪಕ್ಷಾಂತರವನ್ನು ಜನ ಒಪ್ಪಿಕೊಳ್ಳಲು ಶುರು ಮಾಡಿದ್ದಾರೆ. ಅಧಿಕಾರಕ್ಕಾಗಿ ಅಲ್ಲವಾದರೂ , ಚುನಾವಣೆಗೆ ನಿಲ್ಲಬೇಕೆಂದೇ ಪಕ್ಷಾಂತರ ಮಾಡಿದ್ದೆ. ಅದರಲ್ಲೂ ವಿಫಲನಾದೆ. ಪಕ್ಷಾಂತರ ಮಾಡಿದ್ದು ನನ್ನ ಮನಸ್ಸಿಗೆ ನೋವು ತಂದಿದೆ,ಮುಜುಗರವಾಗಿದೆ. ನನ್ನನ್ನು ಮೆಚ್ಚಿದ ನಾಯಕರ ಮನಸ್ಸಿಗೆ, ನನ್ನನ್ನು ಮೆಚ್ಚಿದ ಜನರಿಗೆ ನೋವು ತಂದಿದೆ. ಸಾರ್ವಜನಿಕವಾಗಿ ನಾನು ಎಲ್ಲರ ಕ್ಷಮೆ ಕೇಳುತ್ತೇನೆ” ಎಂದರು.
”10 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, 10 ವರ್ಷ ಕಾಂಗ್ರೆಸ್ ಶಾಸಕನಾಗಿ, 5 ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಗುರುತು ಮಾಡಿಕೊಟ್ಟಿದ್ದು ಕಾಂಗ್ರೆಸ್ .44 ಜನ ಸಂಸದರು ಇದ್ದ ಸಂದರ್ಭದಲ್ಲಿ ನನಗೆ ದೆಹಲಿ ಮಟ್ಟದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮಾತೃ ಪಕ್ಷ ಕಾಂಗ್ರೆಸ್ ಗೆ ನಾನು ಮರಳಿದ್ದೇನೆ. ನನ್ನನ್ನು ಎಲ್ಲರೂ ಅತ್ಯಂತ ಗೌರವದಿಂದ ಸ್ವಾಗತಿಸಿದ್ದೀರಿ.ಎಲ್ಲವನ್ನೂ ಸರಿಪಡಿಸಿಕೊಂಡು ಮುಂದೆ ಹೋಗಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಋಣಿ ಯಾಗಿದ್ದೇನೆ” ಎಂದರು.
2014 ರಲ್ಲಿ ಮೋದಿ ಅಲೆಯ ನಡುವೆಯೂ ತುಮಕೂರಿನಿಂದ ಸಂಸದರಾಗಿ ಮುದ್ದಹನುಮೇಗೌಡ ಆಯ್ಕೆಯಾಗಿದ್ದರು. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣಕ್ಕಿಳಿದ ಕಾರಣ ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದರು. ಅಸಮಾಧಾನಿತರಾಗಿ ಬಿಜೆಪಿ ಸೇರ್ಪಡೆಯಾಗಿದ್ದರು.
ಈ ಬಾರಿ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವ ಎಲ್ಲಾ ಸಾಧ್ಯತೆಗಳಿವೆ.