Advertisement

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

05:12 PM May 09, 2021 | Team Udayavani |

ಕಲಬುರಗಿ: ರಾಜ್ಯಸಬೆಯ ಮಾಜಿ ಸದಸ್ಯ, ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ ಶಾಣಪ್ಪ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಕೋವಿಡ್ ಸೋಂಕು ದೃಢವಾಗಿದ್ದ ಅವರನ್ನು ಮೂರು ದಿನಗಳ ಹಿಂದೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡ ಶಾಣಪ್ಪ ಅವರು ಎರಡು ಸಲ ಶಹಾಬಾದ ಮೀಸಲು ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು. ಅದರಲ್ಲೂ ಒಂದು ಬಾರಿ ಕೇವಲ 80 ಮತಗಳ ಅಂತರದಿಂದ ಸಿ. ಗುರುನಾಥ ಎದುರು ಗೆಲುವು ಸಾಧಿಸಿದ್ದರು. ನಂತರ ಹಲವು ಚುನಾವಣೆಯಲ್ಲಿ ಸ್ಪರ್ಧಿಸಿದಾದರೂ ಗೆಲುವು ಸಾಧಿಸಲಿಲ್ಲ.

ತದನಂತರ ಜನತಾ ಪರಿವಾರ ನಾಯಕ ಎಂದೇ ಖ್ಯಾತಿ ಪಡೆದಿದ್ದ ಶಾಣಪ್ಪ ಅವರು ಜೆ. ಎಚ್. ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ಎಂಎಲ್ಎ- ಎಂಎಲ್ಸಿ ಇಲ್ಲದೇ ಮಂತ್ರಿಯಾದವರು: ಕೆ.ಬಿ. ಶಾಣಪ್ಪ ಎಂಎಲ್ಎ ಇರದಿದ್ದರೂ ಜೆ.ಎಚ್.‌ಪಟೇಲ್ ಅವರು ಶಾಣಪ್ಪ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಅಬಕಾರಿ ಖಾತೆಯನ್ನೇ ನೀಡಿದ್ದರು. ನಂತರ ಆರು ತಿಂಗಳೊಳಗೆ ಎಂಎಲ್ಎ ಇಲ್ಲವೇ ಎಂಎಲ್ಸಿ ಆಗದಿದ್ದಕ್ಕೆ ಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಜೆ.ಪಿ. ಚಳುವಳಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.

Advertisement

ನಂತರ ಬಿಜೆಪಿ ಸೇರಿದ್ದ ಕೆ.ಬಿ. ಶಾಣಪ್ಪ ಅವರನ್ನು ಮೊದಲು ರಾಜ್ಯಸಭೆಗೆ ನಾಮಕರಣಗೊಳಿಸಲಾಗಿತ್ತು. ತದನಂತರ ರಾಜ್ಯ ವಿಧಾನ ಪರಿಷತ್ ಗೂ ನಾಮನಿರ್ದೇಶನಗೊಳಿಸಲಾಗಿತ್ತು. ಇತ್ತೀಚಿಗಷ್ಟೇ ಅಂದರೆ ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದರು.

ಪುಸ್ತಕ ಓದುವುದರಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದ ಕೆ. ಬಿ.‌ಶಾಣಪ್ಪ ಅವರು ಖ್ಯಾತ ಲೇಖಕರ ಪ್ರಸಿದ್ದ ಆಂಗ್ಲ ಕೃತಿಗಳನ್ನು ಓದಿರುವುದನ್ನು ಕೆಲವು ಸಂದರ್ಭಗಳಲ್ಲಿ ಉಲ್ಲೇಖಿಸುತ್ತಿದ್ದರು.

ಬಿಎಸ್ ವೈ-ಎಚ್ ಡಿಕೆ ಸಂತಾಪ: ಮಾಜಿ ಸಚಿವ ಕೆ. ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಣಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದ ಜನರ ದನಿಯಾಗಿದ್ದರು. ಅವರ ನಿಧನದಿಂದ ಒಬ್ಬ ನೇರ ನಿಷ್ಠುರ ನಡವಳಿಕೆಯ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು ಆಗಿದ್ದ ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ. ಬಿ. ಶಾಣಪ್ಪನವರು ಕೊರೊನಾ ಸೋಂಕಿನಿಂದ ನಿಧನರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ. ಅಭಿಮಾನಿಗಳು ಮತ್ತು ಕುಟುಂಬವರ್ಗಕ್ಕೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next