ಗಜೇಂದ್ರಗಡ: ಮಾಜಿ ಶಾಸಕರು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ರೋಣದ ಸರಕಾರಿ ಪದವಿ ಕಾಲೇಜು ಮುಚ್ಚುವ ಹಂತಕ್ಕೆ ತಲುಪುವಂತೆ ಮಾಡಲು ಕಾರಣಿಬೂತರಾಗಿದ್ದಾರೆ. ಇದನ್ನು ಮರೆಮಾಚಲು ನನ್ನ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಗಂಭೀರವಾಗಿ ಆರೋಪಿಸಿದರು.
ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಣದ ಗಿರಡ್ಡಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯವನ್ನು ಹಾಜರಾತಿ ನೆಪವೊಡ್ಡಿ ಸರ್ಕಾರ ಸ್ಥಳಾಂತರ ಆದೇಶ ಹೊರಡಿಸಿರುವುದರ ಹಿಂದೆ ನನ್ನ ಕೈವಾಡ ಇದೆ ಎಂದು ಮಾಜಿ ಶಾಸಕ ಜಿ.ಎಸ್ ಪಾಟೀಲ ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದಿನ ನನ್ನ ಅಧಿಕಾರವಧಿ ಸಂದರ್ಭದಲ್ಲಿ ಕಾಲೇಜಿಗೆ ಸರಿಯಾದ ಕಟ್ಟಡ ವಿಲ್ಲದೇ ಒಂದೇ ಕೊಠಡಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆಗ 3ರಿಂದ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮಲು ಅವರಿಂದ ಸುಸಜ್ಜಿತ ಕಟ್ಟಡ ನಿರ್ಮಿಲಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಹಾಜರಾತಿ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದಕ್ಕೆ ಅಂದಿನ ಶಾಸಕರಾಗಿದ್ದ ಜಿ.ಎಸ್. ಪಾಟೀಲ ಅವರೇ ಕಾರಣವಾಗಿದ್ದಾರೆ ಎಂದರು.
ರೋಣ ಪಟ್ಟಣದಲ್ಲಿನ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ಸರ್ಕಾರದ ಮೇಲೆ ಒತ್ತಡ ಹೇರಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣಕ್ಕೆ ವರ್ಗಾವಣೆ ಮಾಡುವಲ್ಲಿ ಮಾಜಿ ಶಾಸಕರ ಪಾತ್ರ ಅಡಗಿದೆ. ಈ ಹಿಂದೆ ನನ್ನ ಅಧಿಕಾರವಧಿಯಲ್ಲಿ ರೋಣ ಪಟ್ಟಣಕ್ಕೆ ಮಿನಿ ವಿಧಾನಸೌಧ, ಬಸ್ ನಿಲ್ದಾಣ, ಆರ್ಯುವೇದ ಕಚೇರಿ, ಅಗ್ನಿಶಾಮಕ ದಳದ ಕಚೇರಿ ಸೇರಿದಂತೆ ಹಲವಾರು ಸರಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಆದರೆ. ಜಿ.ಎಸ್. ಪಾಟೀಲ ಅವರ ಕೊಡುಗೆ ಶೂನ್ಯವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದ ಲೆಟರ್ ಹೆಡ್‌ಗಳ ದರ್ಬಾರ ಎತೇಚ್ಚವಾಗಿ ನಡೆದಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಗೆ ಕಡಿವಾಣ ಹಾಕಬೇಕಾದ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮಿಂದೆಳುತ್ತಿದೆ. ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳು ಇದ್ದು ಇಲ್ಲದಂತಾಗಿದೆ. ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಕಾಲೇಜು ಮಂಜೂರು ಮಾಡಿಕೊಳ್ಳುವ ಬದಲು ನಮ್ಮ ಕ್ಷೇತ್ರದ ಕಾಲೇಜನ್ನು ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಳ್ಳುತ್ತಿರುವುದು ಸಮಂಜಸವಲ್ಲ. ಸರ್ಕಾರ ಕೂಡಲೇ ವರ್ಗಾವಣೆ ಆದೇಶ ಹಿಂಪಡೆದು ರೋಣ ಪಟ್ಟಣಕ್ಕೆ ಪದವಿ ಕಾಲೇಜು ನೀಡಬೇಕು ಎಂದು ಒತ್ತಾಯಿಸಿದರು.
ಮುತ್ತಣ್ಣ ಲಿಂಗನಗೌಡರ, ಶರಣಪ್ಪ ಕಂಬಳಿ, ಅಶೋಕ ವನ್ನಾಲ, ಪ್ರಕಾಶ ಸಂಕಣ್ಣವರ, ರವಿರಾಜ ಚವ್ಹಾಣ ಸುದ್ದಿಗೋಷ್ಠಿಯಲ್ಲಿದ್ದರು.