ಬಸವಕಲ್ಯಾಣ: ಜಗತ್ತಿಗೆ ಕಾಯಕ ತತ್ವ, ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಪುಣ್ಯ ಭೂಮಿ ಬಸವಕಲ್ಯಾಣದಿಂದ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಶಾಸಕ ಎಂ.ಜಿ. ಮುಳೆ ಹೇಳಿದರು. ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅವರು, ಯಡಿಯೂರಪ್ಪ ಅವರು ಇಲ್ಲಿಂದ ಸ್ಪರ್ಧಿಸಿದರೆ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಘೋಷಿಸಿದರು.
ಬಸವಣ್ಣನವರು ಪ್ರಧಾನಿಯಾಗಿ ಕೆಲಸ ಮಾಡಿದ ಈ ನೆಲ ಅತ್ಯಂತ ಪವಿತ್ರ ನೆಲವಾಗಿದೆ. ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲಿ ಶರಣರು ಪ್ರಥಮ ಬಾರಿಗೆ ಜಗತ್ತಿಗೆ ಸಂಸತ್ ಪರಿಕಲ್ಪನೆ ನೀಡಿದ್ದಾರೆ. ಪ್ರಧಾನಿಯಾಗಿ ಕೆಲಸ ಮಾಡಿದ ಬಸವಣ್ಣನವರ ನೆಲದಿಂದ ಆಯ್ಕೆಯಾದ ಅಭ್ಯರ್ಥಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ನಮ್ಮ ಆಶಯವಾಗಿದೆ ಎಂದರು.
ಬಸವಕಲ್ಯಾಣದಲ್ಲಿ 12ನೇ ಶತಮಾನದ ಗತವೈಭವ, ಗೌರವ ಪುನರ್ ಸ್ಥಾಪನೆ ಆಗಬೇಕಾದರೆ. ಇಲ್ಲಿಂದ ಸ್ಪ ರ್ಧಿಸಲು ಬಿ.ಎಸ್. ಯಡಿಯೂರಪ್ಪ ಅವರು ಮನಸ್ಸು ಮಾಡಬೇಕು. ಈ ಬಗ್ಗೆ ಅವರ ಮನವೊಲಿಸಬೇಕು ಎಂದು ವೇದಿಕೆಯಲಿದ್ದ ಮಾಜಿ ಸಿಎಂ ಜಗದೀಶ ಶಟ್ಟರ ಹಾಗೂ ಶ್ರೀರಾಮುಲು ಅವರಿಗೆ ಮನವಿ ಮಾಡಿದರು.
ಮೂರು ದಶಕಗಳ ರಾಜಕೀಯ ಇತಿಹಾದಲ್ಲಿ ಅನೇಕ ಏಳು, ಬೀಳು ಕಂಡಿದ್ದೇನೆ. ಯಾವುದೇ ಷರತ್ತು ಇಲ್ಲದೇ, ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಯಾವುದೇ ಶಂಕೆ ಬೇಡ. ಪಕ್ಷದಲ್ಲಿ ಯಾರಿಗೂ ಭಾರ ಆಗಲಾರೆ. ಬೇರೆಯವರ ಭಾರ ಹೊರಲು ಬಂದಿದ್ದೇನೆ. ಪಕ್ಷ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ರಾಜ್ಯದಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಜನರು ನಿರ್ಣಾಯಕ ಮತದಾರರಾಗಿದ್ದಾರೆ. ಎಲ್ಲೆಡೆ ಸಂಚರಿಸಿ ಬಿಜೆಪಿಗೆ ಬಲ ತುಂಬಲು ಪ್ರಯತ್ನಿಸುತ್ತೇನೆ
ಎಂದರು. ಹಿಂದೆ 1999ರಲ್ಲಿ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪ ರ್ಧಿಸಿ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾದಿಸಿದ್ದೇನೆ. ಆಗ ಜಿಲ್ಲೆಯಲ್ಲಿ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಬಸವಕಲ್ಯಾಣದಲ್ಲಿ ಮಾತ್ರ ಜೆಡಿಎಸ್‌ನಿಂದ ನಾನು ಆಯ್ಕೆಯಾಗಿದ್ದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಂತಿ, ಸುವ್ಯವಸ್ಥೆಗೆ ಹೆಸರಾಗಿದ್ದ ಶರಣರ ನಾಡಿನಲ್ಲಿ ಇಂದು ಭಯದ ವಾತಾವರಣ ನಿರ್ಮಾಣವಾಗಿದೆ. ಕೆಂಪು ಕಲ್ಲಿನ ಗಣಿಗಳಲ್ಲಿ ಒಂದು ಕಲ್ಲಿಗೆ ಎರಡು ರೂಪಾಯಿಯಂತೆ ಹಣ ವಸೂಲಿ ಮಾಡಲಾಗುತ್ತಿದೆ. ವಸತಿ ಯೋಜನೆಯಡಿ ಬಡವರಿಗಾಗಿ ಬರುವ ಮನೆಗಳ ಹಂಚಿಕೆಗೆ ತಲಾ 20 ಸಾವಿರದಂತೆ ಹಣ ತೆಗೆದುಕೊಳ್ಳಲಾಗುತ್ತಿದೆ. ನವೋದಯ, ಸೈನಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಪ್ರವೇಶಕ್ಕಾಗಿ ನಗರದಲ್ಲಿ ನಡೆಯುವ ಕೋಚಿಂಗ್ ಕ್ಲಾಸ್‌ಗಳ ಮೇಲೆ ದಾಳಿ ಮಾಡಿ ಅಲ್ಲಿಯೂ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮುಳೆ ಸ್ಥಳೀಯ ಶಾಸಕ ಖೂಬಾ ಹೆಸರೆತ್ತದೇ ಆರೋಪಿಸಿದರು.
ನಿಮ್ಮ ಕಟ್ಟಡ, ಲೇಔಟ್ ಏನಾಗುತ್ತದೆ ಎನ್ನುವುದು ತಿಳಿಯದ ಸ್ಥಿತಿ ಈಗ ನಿರ್ಮಾಣವಾಗಿದೆ. ಅವರು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದಾರೆ. ನಾನೂ ಯಾರಿಗೂ ಹೆದರುವುದಿಲ್ಲ. ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ ಪುನರ್ ನಿರ್ಮಾಣವಾಗಬೇಕು ಎನ್ನುವುದೇ ನನ್ನ ಆಶಯವಾಗಿದೆ. ಅಲ್ಪ ಸಂಖ್ಯಾತರಲ್ಲಿ ಯಾವುದೇ ಸಂದೇಹ ಬೇಡ. ನಿಮ್ಮ ರಕ್ಷಣೆ ನನ್ನ ಜವಾಬ್ದಾರಿ. ಭರವಸೆ ಇಟ್ಟು ನಮ್ಮೊಂದಿಗೆ ಬನ್ನಿ ಎಂದು ಮನವಿ ಮಾಡಿದರು.