Advertisement

ಸರ್ಕಾರದ ವೈಫಲ್ಯವೇ ಮತ್ತೊಂದು ಅಮಾಯಕ ಜೀವದ ಕೊಲೆಗೆ ಕಾರಣ; ಮಾಜಿ ಶಾಸಕ ಮೊಯಿದ್ದೀನ್ ಬಾವ

09:51 AM Dec 25, 2022 | Team Udayavani |

ಮಂಗಳೂರು: ಪೋಲಿಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕಠಿಣ ರೀತಿಯ ಶಿಕ್ಷೆಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಆಗ್ರಹಿಸಿದರು.

Advertisement

ಅವರು ಸುರತ್ಕಲ್ ನ ಕೃಷ್ಣಾಪುರ ಐದನೇ ಬ್ಲಾಕ್‌ ನಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಜಲೀಲ್ ಹತ್ಯೆ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು “ದಯವಿಟ್ಟು ನಾಗರೀಕರು ಸೋಷಿಯಲ್ ಮೀಡಿಯಾದಲ್ಲಿ ಬರುವ ಯಾವುದೇ ರೀತಿಯ ಸಮಾಜದಲ್ಲಿ ಅಶಾಂತಿ ಮೂಡಿಸುವ ಸುಳ್ಳು ವದಂತಿಗಳಿಗೆ ಕಿವಿಕೊಡದೆ ಶಾಂತಿಯಿಂದ ವರ್ತಿಸಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ‌ ಜಾಗೃತಿ ವಹಿಸಿ ಪೋಲಿಸ್ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಸಹಕರಿಬೇಕು” ಎಂದು ಜನತೆಯಲ್ಲಿ ವಿನಂತಿಸಿದರು.

ಕರಾವಳಿ ಪ್ರದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಕೊಲೆ ಪ್ರಕರಣಗಳನ್ನು ಹಾಗೂ ಇತ್ತೀಚಿಗೆ ಸುರತ್ಕಲ್ ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರೆಡೆ ನಡೆದ ಕೊಲೆ ಪ್ರಕರಣ ಮಾಸಿ ಹೋಗುವ ಮುನ್ನವೇ ಮತ್ತೊಂದು ಕೊಲೆ ನಡೆದಿರುವುದು ಖೇದಕರದ ಸಂಗತಿ. ಇಂತಹ ಪ್ರಕರಣ ಮರುಕಳಿಸುವುದನ್ನು ಗಮನಿಸಿದಾಗ ರಾಜ್ಯದ ಗೃಹ ಇಲಾಖೆಯ ಮತ್ತು ಸರ್ಕಾರದ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಈ ಹಿಂದೆ ನಡೆದ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಅರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳುವಲ್ಲಿ ನಿರುತ್ಸಾಹ ತೋರಿಸಿದ ಗೃಹ ಸಚಿವರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಕೊಲೆ ನಡೆದಿದೆ ಎಂದರು.

ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಈ ಕೂಡಲೇ ಎಚ್ಚೆತ್ತುಕೊಂಡು ಅಮಾಯಕರನ್ನು ಕೊಂದು, ಅವರ ಕುಟುಂಬಗಳನ್ನು ತಬ್ಬಲಿಯತ್ತ ದೂಡುವ ಕೊಲೆಗಾರರಿಗೆ ಹಾಗೂ ಅವರಿಗೆ ರಕ್ಷಣೆ ನೀಡಿ ಸಹಕರಿಸುವ ವ್ಯಕ್ತಿಗಳಿಗೆ ಕಾನೂನು ಅಡಿಯಲ್ಲಿ ಸರಿಯಾದ ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಿ ಕಾನೂನಿನ ಭಯ ಹುಟ್ಟಿಸುವ ಮೂಲಕ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕು ಎಂದರು.

ಮುಂದಿನ ದಿನಗಳಲ್ಲಿ ಇಂತಹ ಹಲ್ಲೆ, ಕೊಲೆ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಕೊಂಡು ಜನಸಾಮಾನ್ಯರಿಗೆ ರಕ್ಷಣೆಯನ್ನು ನೀಡಿ ಜನರ ಅತ್ಯಮೂಲ್ಯವಾದ ಜೀವವನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next