ತುಮಕೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರುವುದು ರಾಜ್ಯಕ್ಕೆ ಮಾಡಿದ್ದ ಅವಮಾನ. ಇದು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆಯ ಮುನ್ಸೂಚನೆಯಾಗಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ವರಿಷ್ಠರು ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾದರೆ ಅವರ ಲಿಸ್ಟ್ ಗೆ ಅನುಮತಿ ಸಿಗಬೇಕಿತ್ತು ಎಂದು ಹೇಳಿದರು.
ಒಬ್ಬ ಕೇಂದ್ರ ಸಚಿವರನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳಿಗೆ ಅವಕಾಶ ಕೊಡುವುದಿಲ್ಲ ಅಂದರೆ ಇದು ನಿಜಕ್ಕೂ ಖಂಡನೀಯ. ಮುಖ್ಯಮಂತ್ರಿಗಳು ಇಡೀ ಕರ್ನಾಟಕದ ನಾಯಕರು. ಅವರಿಗೆ ಒಬ್ಬ ಕೇಂದ್ರದ ಯಕಶ್ಚಿತ್ ಗೃಹ ಸಚಿವರು ಭೇಟಿಗೆ ಅವಕಾಶ ಕೊಟ್ಟಿಲ್ಲ ಅಂದರೆ ಕರ್ನಾಟಕ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಸರ್ಕಾರ ರಚನೆ ಮಾಡಿರುವ ಪ್ರಾಧಿಕಾರ ಕುರಿತು ಮಾತನಾಡಿ ಇಷ್ಟು ದಿನ ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಇರಲಿಲ್ವಾ. ಆವತ್ತು ಮರಾಠರು ಇರಲಿಲ್ವಾ, ಮರಾಠರು ನಿನ್ನೆ ಹುಟ್ಟಿದರಾ ಎಂದು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ:ಲಿಂಗಾಯುತರಿಗೆ ಮೀಸಲಾತಿ ನೀಡಿ ಹಿಂದುಳಿದ ವರ್ಗಕ್ಕೆ ಸೇರಿಸಲು ಬಸವರಾಜ್ ಹೊರಟ್ಟಿ ಒತ್ತಾಯ
ಬಸವಕಲ್ಯಾಣದಲ್ಲಿ ಉಪಚುನಾಚಣೆ ನಡೆಯಲಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಧಿಕಾರ ರಚನೆ ಮಾಡಿದ್ದಾರೆ. ಇದೇ ರೀತಿ ಪ್ರಾಧಿಕಾರಗಳನ್ನು ರಚನೆ ಮಾಡುತ್ತಾ ಹೋಗುವುದು ದುರಂತವೇ ಸರಿ ಎಂದರು.
ಪ್ರಾಧಿಕಾರಿದಲ್ಲಿ ಹಣ ಇರುವುದಿಲ್ಲ. ಸುಮ್ಮನೆ ರಚನೆ ಮಾಡುತ್ತಾರೆ. ನಾಳೆ ತೆಲುಗು, ತಮಿಳು ಪ್ರಾಧಿಕಾರ ಕೇಳುತ್ತಾರೆ. ಅದನ್ನು ಮಾಡಿದರೆ ತಪ್ಪಲ್ವಾ. ನಾವು ರಾಜ್ಯೋತ್ಸವ ಮಾಡುವಾಗ ಮರಾಠಿಗರು ಕಪ್ಪುಪಟ್ಟಿ ಧರಿಸಿ ಕನ್ನಡಿಗರಿಗೆ ಅವಮಾನ ಮಾಡುತ್ತಾರೆ. ಅಂಥವರಿಗೆ ಉದ್ದಾರ ಮಾಡುತ್ತೇನೆ ಅಂದರೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.