Advertisement

ಹಿಂದೂಗಳ ಮತ ಸೆಳೆಯಲು ಬಿಜೆಪಿ ಹುನ್ನಾರ: ಮಾಜಿ ಶಾಸಕ ಕೆ. ಎನ್‌.ರಾಜಣ್ಣ 

04:38 PM Apr 09, 2022 | Team Udayavani |

ತುಮಕೂರು: ರಾಜ್ಯದಲ್ಲಿ ಪ್ರತಿದಿನ ಹಿಜಾಬ್‌, ಹಲಾಲ್‌, ಆಜಾನ್‌, ಮುಸ್ಲಿಮರೊಂದಿಗೆ ವ್ಯಾಪಾರ ನಿರ್ಬಂಧ ವಿವಾದವನ್ನು ಹುಟ್ಟು ಹಾಕುತ್ತಾ ಸಮಾಜದಲ್ಲಿ ಶಾಂತಿ ಭಂಗ ಮಾಡಿ ಹಿಂದೂಗಳ ಮತ ಸೆಳೆಯುವ ಹುನ್ನಾರ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ. ಎನ್‌.ರಾಜಣ್ಣ ಆರೋಪಿಸಿದರು.

Advertisement

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಮತ ಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳುವ ಹುನ್ನಾರ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಂಗತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಗಮನಿಸಿದರೆ ಅವಧಿ ಪೂರ್ವ ಚುನಾವಣೆ ನಡೆಸಲು, ಈ ರೀತಿಯ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ನುಡಿದರು. ಹಿಂದೂ ಮತಬ್ಯಾಂಕ್‌ ರಾಜಕಾರಣಕ್ಕೆ ಮುಂದಾಗಿ ಸಹೋದರರಂತೆ ಬಾಳುತ್ತಿದ್ದ ಹಿಂದೂ-ಮುಸ್ಲಿರಲ್ಲಿ ವಿವಾದದ ವಿಷಬೀಜ ಬಿತ್ತಿ ಒಡಕು ಮೂಡಿಸುತ್ತಿದ್ದಾರೆ. ಇದರ ವಿರುದ್ಧ ಪ್ರಜ್ಞಾವಂತ ಸಾಹಿತಿಗಳು, ವಿಚಾರವಂತರನ್ನು ಕರೆಸಿ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಆಹಾರ ಸಂಸ್ಕೃತಿಗೂ ಧರ್ಮದ ಲೇಪನ: ಶಾಲಾ- ಕಾಲೇಜಲ್ಲಿ ಹಿಜಾಬ್‌ ಹಾಕುವ ವಿಚಾರವಾಗಿ ಮೊದಲಿಗೆ ಶುರುವಾದ ವಿವಾದದ ಸಂಬಂಧ ಪರೀಕ್ಷೆ ಹತ್ತಿರ ವಿರುವಾಗ ಸರ್ಕಾರ ಆದೇಶ ಹೊರಡಿಸಿದ್ದೇ ಸಮಂಜಸ ವಲ್ಲ. ಮುಂದಿನ ಶೈಕ್ಷಣಿಕ ವರ್ಷ ಆರಂಭದಿಂದ ಏಕರೂಪ ಸಮವಸ್ತ್ರ ಆದೇಶ ಹೊರಡಿಸಬೇಕಿತ್ತು. ಕಡೆಗೆ ಹೈಕೋರ್ಟ್‌ ಸಮವಸ್ತ್ರ ಪಾಲನೆ ಕಡ್ಡಾಯ ತೀರ್ಪು ನೀಡಿತು. ಪರೀಕ್ಷೆ ಸಂದರ್ಭದಲ್ಲಿ ಈ ವಿವಾದ ಕೆದಕಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಹಾಳಾಯಿತು. ಅದೇ ರೀತಿ ಹಲಾಲ್‌-ಜಟ್ಕಾ ಕಟ್‌ ಪದಗಳೇ ಜನರಿಗೆ ಗೊತ್ತಿರಲಿಲ್ಲ. ಆಹಾರ ಸಂಸ್ಕೃತಿಗೂ ಧರ್ಮದ ಲೇಪನ ಮೆತ್ತಿ ಜನರ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ ಎಂದರು.

ಹಲಾಲ್‌ ಸರ್ಟಿಫಿಕೇಷನ್‌ ತೆಗೆಸಲಿ: ಬೀಫ್ ರಫ್ತು ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಹೆಚ್ಚುತ್ತಿದ್ದು, ಹಲಾಲ್‌ ಸರ್ಟಿಫಿಕೇಷನ್‌ ಇಲ್ಲದೇ ಬೀಫ್ ರಫ್ತು ಮಾಡುವಂತಿಲ್ಲ. ಹಲಾಲ್‌ ಮಾಂಸ ಖರೀದಿ ಬೇಡ ಎನ್ನುತ್ತಿರುವವರು ಹಲಾಲ್‌ ಸರ್ಟಿಫಿಕೇಷನ್‌ ಕಡ್ಡಾಯ ಮಾಡಿರುವ ಆದೇಶವನ್ನು ಮೊದಲು ಕೇಂದ್ರದ ಮೇಲೆ ಒತ್ತಡ ಹೇರಿ ತೆಗೆಸಲಿ. ಅದನ್ನು ಬಿಟ್ಟು ಹಲಾಲ್‌ ಮಾಂಸ ತಿನ್ನಬೇಡಿ ಎನ್ನಲು ಏನು ಹಕ್ಕಿದೆ ಎಂದು ಪ್ರಶ್ನಿಸಿದರು.

ಟಿಪ್ಪುಸುಲ್ತಾನ್‌ ರನ್ನು ಖಳನಾಯಕ ರೀತಿ ಬಿಂಬಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಟಿಪ್ಪು ಧರ್ಮಾಂಧನಾಗಿದ್ದರೆ ಅವನ ಬೆಂಗಳೂರು ಅರಮನೆಯ ಪಕ್ಕ ಕೋಟೆವೆಂಕ ಟರಮಣ ದೇವಸ್ಥಾನವೇ ಸ್ಥಾಪನೆಯಾ ಗುತ್ತಿರಲಿಲ್ಲ. ನಂದಿಬೆಟ್ಟದಲ್ಲೂ ಬೇಸಿಗೆ ಅರಮನೆ, ಯೋಗನಂದೀಶ್ವರ ಜೊತೆಯಾಗಿ ಇರುತ್ತಿರಲಿಲ್ಲ. ಶೃಂಗೇರಿ ಮಠವನ್ನು ಉಳಿಸಲು ಪೇಶ್ವೆಗಳ ವಿರುದ್ಧ ಹೋರಾಡಿದವರು ಇದೇ ಟಿಪ್ಪು ಎಂದು ರಾಜಣ್ಣ ಪ್ರತಿಪಾದಿಸಿದರು.

Advertisement

ಹೈಕಮಾಂಡ್‌ ತೀರ್ಮಾನ: ಮತ್ತೆ ಸಿಎಂ ಆಗುವೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎನ್‌.ರಾಜಣ್ಣ, ಸಿಎಂ ಆಗಿದ್ದಾಗ ಅವರು ನೀಡಿದ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತಿತರ ಕಾರ್ಯಕ್ರಮಗಳು ಇಡೀ ಸಮಾಜಕ್ಕೆ ಉಪಕಾರಿಯಾಗಿದ್ದು, ವೈಯಕ್ತಿಕವಾಗಿ ಅವರು ಸಿಎಂ ಆಗಬೇಕೆಂದು ನಾನು ಬಯಸುವೆ. ಆದರೆ ಪಕ್ಷದ ಹೈಕಮಾಂಡ್‌, ಶಾಸಕಾಂಗ ಪಕ್ಷ ಈ ತೀರ್ಮಾನ ಕೈಗೊಳ್ಳಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ದೇವರಾಜು, ಯುವಕಾಂಗ್ರೆಸ್‌ ಅಧ್ಯಕ್ಷ ಶಶಿಹುಲಿಕುಂಠೆಮಠ್, ಸಹಕಾರ ಮಹಾಮಂಡಲ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ರಾಜೇಶ್‌ದೊಡ್ಮನೆ ಮತ್ತಿತರರು ಇದ್ದರು.

ವಿಚಾರ ಸಂಕಿರಣ : ಬಿಜೆಪಿ ಮತ್ತವರ ಬೆಂಬಲಿತ ಸಂಘಟನೆಗಳು ಮಾಡುತ್ತಿರುವ ದುಷ್ಕೃತ್ಯಗಳ ಬಗ್ಗೆ ಜನಜಾಗೃತರಾಗಬೇಕಿದೆ. ಈ ದಿಸೆಯಲ್ಲಿ ಪ್ರಜ್ಞಾವಂತ ಸಾಹಿತಿ, ಹೋರಾಟಗಾರರಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಪ್ರೊ.ರವಿವರ್ಮಕುಮಾರ್‌, ಡಾ.ಸಿ.ಎಸ್‌.ದ್ವಾರಕನಾಥ್‌ ಮತ್ತಿತರನ್ನು ಕರೆಸಿ ಶೀಘ್ರದಲ್ಲೇ ವಿಚಾರಸಂಕಿರಣ ಏರ್ಪಡಿಸಲಾಗುವುದು ರಾಜಣ್ಣ ತಿಳಿಸಿದರು.

ಎಚ್‌ಡಿಕೆ ಹೇಳಿಕೆ ಸರಿ : ಕೆಲವು ಪುಂಡರು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಸತ್ಯವಾಗಿದೆ. ಅವರ ಹೇಳಿಕೆಯನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಹಿಂದೂಪರ ಸಂಘಟನೆಗಳ ಹೆಸರಿನಲ್ಲಿ ದುಷ್ಕೃತ್ಯ ವೆಸಗುತ್ತಿರುವ ಅಂತಹ ಪುಂಡರನ್ನು ಹಿಡಿದು ನಿಯಂತ್ರಿಸುವ ಕೆಲಸ ಮಾಡುವುದನ್ನು ಬಿಟ್ಟು ಅವರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ ಎಂದು ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next