Advertisement

“ಕಮಲ’ಬಿಟ್ಟು “ಕೈ’ಹಿಡಿಯುವರೇ ಮಾಜಿ ಶಾಸಕ ಬಿದರೂರ?

02:15 PM Apr 09, 2019 | Team Udayavani |
ಗದಗ: 2004ರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಗೆಲುವಿನ ಕೇಕೆ ಹಾಕಲು ರಣತಂತ್ರವನ್ನೇ ರೂಪಿಸಿದೆ. ಈಗಾಗಲೇ ನಾನಾ ರೀತಿಯ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಕಾಂಗ್ರೆಸ್‌ ವರಿಷ್ಠರು ಇದೀಗ ಗದಗ ಜಿಲ್ಲೆಯ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಗಾಳ ಹಾಕಿದ್ದಾರೆ. ಈ ಕುರಿತಂತೆ ಕಾಂಗ್ರೆಸ್‌ ನಾಯಕರೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಿಧಾನಸಭೆ ಚುಣಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರು ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು. ಅಲ್ಲದೇ, ಸದ್ಯ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಡಿ.ಆರ್‌. ಪಾಟೀಲ ಅವರ ಬಗ್ಗೆ ಮೃದು ಧೋರಣೆ ಹೊಂದಿದವರಲ್ಲಿ ವಿರೋಧ ಪಕ್ಷದವರೂ ಇದ್ದಾರೆ.
ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದೇ ಮುನಿಸಿಕೊಂಡು, ತಟಸ್ಥರಾಗಿದ್ದ ಶ್ರೀಶೈಲಪ್ಪ ಬಿದರೂರ ಅವರನ್ನು ಸೆಳೆದು ಕಾಂಗ್ರೆಸ್‌ ಗೆಲುವಿನ ತಂತ್ರ ರೂಪಿಸುತ್ತಿದೆ ಎಂದು ಹೇಳಲಾಗಿದೆ.
ಅದಕ್ಕೆ ಪುಷ್ಠಿ ನೀಡುವಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಚ್‌.ಕೆ.ಪಾಟೀಲ ಅವರು ಶ್ರೀಶೈಲಪ್ಪ ಬಿದರೂರ ಅವರೊಂದಿಗೆ ಚರ್ಚೆ ನಡೆಸುತ್ತಿರುವಂತೆ ಭಾಸವಾಗುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಡಿಸಿಸಿ ಅಧ್ಯಕ್ಷ ಜಿ.ಎಸ್‌. ಪಾಟೀಲ, ಮಾಜಿ ಶಾಸಕ ಎಸ್‌.ಎನ್‌. ಪಾಟೀಲ ಸೇರಿದಂತೆ ಹಲವರಿದ್ದಾರೆ.
ವರಿಷ್ಠರ ವಿರುದ್ಧ ಬಿದರೂರ ಅಸಮಾಧಾನ?: ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಗದಗ ಮತಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಯಾಗಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಬದಲಾಗಿ ಬಿಜೆಪಿ ಯುವ ಮುಖಂಡ ಹಾಗೂ 2013ರಲ್ಲಿ ಬಿಎಸ್‌ಆರ್‌ನಿಂದ ಕಣಕ್ಕಿಳಿದಿದ್ದ ಅನಿಲ್‌ ಪಿ. ಮೆಣಸಿನಕಾಯಿ ಅವರಿಗೆ ಟಿಕೆಟ್‌ ದೊರಕಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಶ್ರೀಶೈಲಪ್ಪ ಬಿದರೂರ ಟಿಕೆಟ್‌ ಘೋಷಣೆಯಾದ ದಿನದಂದೇ ಸುದ್ದಿಗೋಷ್ಠಿ
ಕರೆದು, ಪಕ್ಷ ಬಿಡುವ ಹಾಗೂ ಪಕ್ಷೇತರರಾಗಿ ಸ್ಪಸುವುದಾಗಿ ಘೋಷಿಸುವ ಮೂಲಕ ಪಕ್ಷದ ವರಿಷ್ಠರಿಗೆ ಸಡ್ಡು ಹೊಡೆದಿದ್ದರು. ಬಳಿಕ ವಿಧಾನಸಭೆ ಚುನಾವಣೆಯಲ್ಲೂ ಪಕ್ಷದ ಪ್ರಚಾರದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಗದಗ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಶ್ರೀಶೈಲಪ್ಪ ಬಿದರೂರು ಅವರೂ ಕಾರಣವೆಂಬ ಆರೋಪಗಳೂ ಕೇಳಿ ಬಂದವು. ಆ ನಂತರವೂ ಪಕ್ಷದ ವೇದಿಕೆ ಹಾಗೂ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು. ಹೀಗಾಗಿ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡಿರಬಹುದು ಎಂದು ಹೇಳಲಾಗಿದೆ.
ಕರೆ ಸ್ವೀಕರಿಸದ ಬಿದರೂರ, ಜಿಎಸ್‌ಪಿ
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂಬುವುದಕ್ಕೆ ಪುಷ್ಠಿ
ನೀಡುವಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಬಗ್ಗೆ ಪ್ರತಿಕ್ರಿಯೆ ಕೇಳಲು ಸ್ವತಃ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌. ಪಾಟೀಲರನ್ನು ಸಂಪರ್ಕಿಸಲು ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ
ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಶಾಸಕರಾಗಿ ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸಿದವರು. ಹೀಗಾಗಿ ಅವರು ಬಿಜೆಪಿ ತೊರೆಯುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ.
 ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
„ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next