ಬೆಳಗಾವಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ತನ್ನ ಹುಟ್ಟು ಹಬ್ಬದ ದಿನವಾದ ಶನಿವಾರವೇ ಸಿಬಿಐ ಕಸ್ಟಡಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.
ಶನಿವಾರ ಬೆಳಗ್ಗೆಯೇ ಸಿಬಿಐ ಅಧಿಕಾರಿಗಳು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದು, ಜೈಲಿನೊಳಗೆ ಹೋಗಿ ಕೋರ್ಟ್ ನೀಡಿರುವ ಆದೇಶದ ಪ್ರತಿ ಹಿಡಿದುಕೊಂಡು ಜೈಲಿನ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಮೂರು ದಿನಗಳ ಕಾಲ ವಿನಯ ಸಿಬಿಐ ಕಸ್ಟಡಿಯಲ್ಲಿ ಇರಲಿದ್ದಾರೆ.
ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲು ಹಿಂಡಲಗಾ ಜೈಲಿನಲ್ಲಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಗುರುವಾರ ಧಾರವಾಡದಲ್ಲಿ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಇಡೀ ದಿನ ವಿಚಾರಣೆ ಬಳಿಕ ಸಂಜೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗುತ್ತು. ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಲ್ಲಲಿದೆ: ಡಿಕೆ ಶಿವಕುಮಾರ್
ವಿನಯ್ ಕುಲಕರ್ಣಿ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದರು. ಆದರೆ ಸದ್ಯ ವಿನಯ್ ಕುಲಕರ್ಣಿ ತನ್ನ ಹುಟ್ಟು ಹಬ್ಬದ ದಿನ ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ.