ಕೋಲಾರ: ಅಧಿಕಾರವಿಲ್ಲದಿದ್ದರೂ ನಗರದ ಮುನೇಶ್ವರ ನಗರ ಬಡಾವಣೆ ಅಭಿವೃದ್ಧಿಗೆ ಸರ್ಕಾರದಿಂದ 50ಲಕ್ಷ ಅನುದಾನ ತಂದಿದ್ದೇನೆ. ಆದರೆ, ಕಳೆದ 5 ವರ್ಷಗಳಿಂದ ಶಾಸಕರಾಗಿದ್ದವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಮತ ಕೇಳಲು ಬರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನವರನ್ನು ಪ್ರಶ್ನಿಸಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದರು.
ನಗರದ ಮುನೇಶ್ವರ ಬಡಾವಣೆಯಲ್ಲಿ ವಾರ್ಡಿನ ಕುಂದು ಕೊರತೆಗಳನ್ನು ವೀಕ್ಷಿಸಿ ಮಾತ ನಾಡಿದ ಅವರು, ನೀವು ಮತಕೊಟ್ಟು ಗೆಲ್ಲಿಸಿದ ಶಾಸಕ ಶ್ರೀನಿವಾಸಗೌಡರು ಜೆಡಿಎಸ್‌ನಿಂದ ಗೆದ್ದು ಇದೀಗ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಮಾಡಿದ 16 ಕೋಟಿ ಸಾಲ ಹೇಗೆ ತೀರಿಸೋದು ಎಂದು ಸ್ವತಃ ಅವರೇ ಹೇಳಿರುವ ಆಡಿಯೋ ವೈರಲ್ ಆಗಿರುವುದನ್ನು ನೀವು ಕೇಳಿದ್ದೀರಿ ಎಂದರು.
ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ: ಈ ಬಾರಿಯೂ ನೀವು ಜೆಡಿಎಸ್ ಅಥವಾ ಕಾಂಗ್ರೆಸ್‌ಗೆ ಮತ ನೀಡಿದರೆ ನಿಮ್ಮ ಬಡಾವಣೆಯ ಅಭಿವೃದ್ಧಿಯ ಮಾತು ಕನಸಾಗಲಿದೆ ಎಂಬುದನ್ನು ಅರಿತು, ಬಿಜೆಪಿಗೆ ಮತ ನೀಡಿ. ಈ ಭಾಗದ ಅಭಿವೃದ್ಧಿಗೆ ನಿಮಗೆ ಮಾತು ಕೊಡುಗೆ ಎಂದರು.
ಗ್ರಾಮೀಣ ಪ್ರದೇಶ ಮತ್ತು ನಗರವನ್ನು ಈಗಿನ ಶಾಸಕರು ನಿರ್ಲಕ್ಷಿಸಿದ್ದಾರೆ, ನಾನು ಕಳೆದ 10 ವರ್ಷಗಳ ಕಾಲ ನಗರದಲ್ಲಿ ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದ್ದೇನೆ, ಕಾರಣಾಂತರಗಳಿಂದ ಕಳೆದ ಬಾರಿ ಸೋತಿದ್ದೇನೆ. ಈ ಬಾರಿ ನನಗೆ ಆಶೀರ್ವಾದ ಮಾಡಿ, ಮತ್ತೆ ನಿಮ್ಮ ಆಶಯದಂತೆ ಅಭಿವೃದ್ಧಿಗೆ ಮುಂದಾಗುವೇ ಎಂದು ಮನವಿ ಮಾಡಿದರು.
ನಗರ ಅಭಿವೃದ್ಧಿ ಪಡಿಸುವಲ್ಲಿ ಈಗಿನ ಶಾಸಕರು ಅಸಮರ್ಥರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಗರಾಭಿವೃದ್ಧಿ ಸಚಿವರಿಂದ ನಗರಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅನುದಾನ ನೀಡಿದ್ದಾರೆ.ಅನುದಾನ ತಂದು ನಗರ ಅಭಿವೃದ್ಧಿ ಮಾಡುವಲ್ಲಿ ಈಗಿನ ಶಾಸಕರು ಅಸಮರ್ಥರಾಗಿದ್ದಾರೆ ಎಂದು ಟೀಕಿಸಿದ ಅವರು, ಯಾವುದೇ ರೀತಿಯ ಅಧಿಕಾರವಿಲ್ಲದಿದ್ದರೂ ನಾನು ಕೋಲಾರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಈ ನಿಟ್ಟನಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಇದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ತಿಳಿಸಿದರು.
ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಮಾಜಿ ಸದಸ್ಯರಾದ ಅರುಣ್ ಪ್ರಸಾದ್,ಬಂಕ್ ಮಂಜುನಾಥ್, ತಾಲೂಕು ಅಧ್ಯಕ್ಷ ರಾಮಚಂದ್ರಗೌಡ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಕುಮಾರ್, ರೈತ ಘಟಕದ ಅಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.