Advertisement

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ: ಮಾಜಿ ಸಚಿವ ಡಾ.ಶರಣಪ್ರಕಾಶ‌ ಆಗ್ರಹ

02:52 PM Mar 29, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಪ್ರತಿಪಕ್ಷವಾದ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮೇಲೆಯೇ ಗೂಂಡಾಗಿರಿ ಮಾಡುವಷ್ಟು ವ್ಯವಸ್ಥೆ ಕಟ್ಟು ಹೋಗಿದೆ. ಹೀಗಾಗಿ ಈ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕೆಂದು ಮಾಜಿ ಸಚಿವ ಡಾ.ಶರಣಪ್ರಕಾಶ‌್ ಪಾಟೀಲ್ ಒತ್ತಾಯಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾಗಿದ್ದ ಬಿಜೆಪಿ ಮುಖಂಡ ರಮೇಶ ಜಾರಕಿಹೊಳಿ ಸರ್ಕಾರವನ್ನೇ ಬೀಳಿಸಿದವ ನಾನು ಸಿಡಿ ಪ್ರಕರಣವೇನು ಮಹಾ ಎನ್ನುವಂತಹ ಹೇಳಿಕೆ ಕೊಟ್ಟು ಬಹಿರಂಗವಾಗಿ ಕಾನೂನು ವ್ಯವಸ್ಥೆಗೆ ಸವಾಲು ಹಾಕುತ್ತಾರೆ.  ಬೆಳಗಾವಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಗೂಂಡಾಗಳ ಮೂಲಕ‌ ಹಲ್ಲೆ ಮಾಡಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಇದನ್ನು ಕಾನೂನು ಸುವ್ಯವಸ್ಥೆ ಎನ್ನಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.

ಸಂತ್ರಸ್ತ ಯುವತಿ ತನಗೆ ರಮೇಶ ಜಾರಕಿಹೊಳಿಯಿಂದ ಜೀವ ಭಯವಿದೆ ಎಂದು ಹೇಳುತ್ತಿದ್ದಾಳೆ. ರಮೇಶ ವಿರುದ್ಧ ಗಂಭೀರವಾದ 376(ಸಿ) ಪ್ರಕರಣ ದಾಖಲಾಗಿದೆ. ಇದೇ‌ ಪ್ರಕರಣ ಬೇರೆಯವರ ಮೇಲೆ ದಾಖಲಾದರೆ ಸುಮ್ಮನೆ ಬಿಡುತ್ತಾರಾ?.‌ ಸ್ವತಃ ಸಂತ್ರಸ್ತೆ ಯುವತಿ ದೂರು ಕೊಟ್ಟರೂ ರಮೇಶ ಮೇಲೆ ಕಾನೂನು ಕ್ರಮ‌ ತೆಗೆದುಕೊಳ್ಳುತ್ತಿಲ್ಲ. ಮಾನ‌ ಮರ್ಯಾದೆ ಎಲ್ಲ ಗಾಳಿಗೆ ತೂರಿ ರಮೇಶ ರಕ್ಷಣೆಗೆ ಮಾನಗೇಡಿ ಸರ್ಕಾರ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸಂಸದರು ಕೇವಲ ದಿಲ್ಲಿಯಲ್ಲಿ ಇರುವುದಲ್ಲ, ಹಳ್ಳಿಗೂ ಬರಬೇಕು: ಸತೀಶ್ ಜಾರಕಿಹೊಳಿ

ಸಿಡಿ ಪ್ರಕರಣದಲ್ಲಿ ಅಧಿಕಾರದ ದುರ್ಬಳಕೆ ಆಗುತ್ತಿದೆ. ಎಸ್ಐಟಿ ರಮೇಶ ಜಾರಕಿಹೊಳಿ ಮತ್ತು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಆರೋಪಿ ಸ್ಥಾನದಲ್ಲಿರುವ ರಮೇಶನನ್ನು ಬಂಧಿಸುವುದು ಬಿಟ್ಟು, ಆತನ ಪರವಾಗಿ ಗೃಹ ಸಚಿವರು ಹೇಳಿಕೆ ಕೊಡುತ್ತಿದ್ದಾರೆ‌. ಇದಕ್ಕಿಂತ ನಾಚಿಕಗೇಡಿತನದ ಸಂಗತಿ ಯಾವುದೂ ಇಲ್ಲ ಎಂದು ಟೀಕಿಸಿದರು.

Advertisement

ತನ್ನ ಮೇಲಿನ ಆರೋಪವನ್ನು ಮುಚ್ಚಿಟ್ಟುಕೊಳ್ಳಲು ರಮೇಶ ಜಾರಕಿಹೊಳಿ, ಕೆ‌ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇಡೀ ಪ್ರಕರಣವನ್ನು ಡಿ.ಕೆ. ಶಿವಕುಮಾರ್ ಅತ್ತ ತಿರಗಿಸುವ ಕುತಂತ್ರ ಮಾಡುತ್ತಿದ್ದಾರೆ. ಹೀಗಾಗಿ ತಕ್ಷಣ ರಮೇಶ ಜಾರಕಿಹೊಳಿಯನ್ನು ಬಂಧಿಸುವ ಕೆಲಸ ಮಾಡಬೇಕು. ಈಗಾಗಲೇ ಯುವತಿ ಹೇಳಿರುವಂತೆ ಹೈಕೋರ್ಟ್ ನ ಮುಖ್ಯ ನಾಯಮೂರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಶರಣಪ್ರಕಾಶ ಹೇಳಿದರು.

ಇದನ್ನೂ ಓದಿ: ನಮಗ್ಯಾವ ಒತ್ತಡವಿಲ್ಲ, ಡಿಕೆಶಿಯವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ: ಸಿಡಿಲೇಡಿ ಪೋಷಕರ ಹೇಳಿಕೆ

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ಐಟಿಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. 22 ಜನರ ಎಸ್ಐಟಿ ತಂಡ ಇದ್ದರೂ ಯುವತಿಯನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿಲ್ಲ. ಎಸ್ಐಟಿ ತನಿಖೆ ಸೆಲೆಕ್ಟಿವ್ ಆಗಿ ನಡೆಯುತ್ತಿದೆ ಎಂದು ದೂರಿದರು.

ರಷ್ಯಾ ಸರ್ವರ್ ನಿಂದ ವಿಡಿಯೋ ಬಿಡುಗಡೆಯಾಗಿದೆ ಅಂತಾ ಹೇಳಿದ್ದು ಬಿಜೆಪಿಯವರು.‌ 9 ಕೋಟಿ ಬಳಕೆಯಾಗಿದೆ ಎಂದು ಹೇಳಿರುದು ಬಿಜೆಪಿಯವರು. ಇನ್ನು 19 ಸಿಡಿಗಳು ಇವೆ ಅಂತಾ ಹೇಳಿರುವುದು ಬಿಜೆಪಿಯವರು. ಆದರೂ, ಯಾರನ್ನೂ ಪ್ರಶ್ನೆ ಮಾಡುತ್ತಿಲ್ಲ. ಎಸ್ಐಟಿಯಿಂದ ಮೂಲ ವಿಷಯ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ ಆಗಿದೆ ಎಂದರು.

ಶಾಸಕರು ಮುಂಬೈಯಲ್ಲಿ ಇದ್ದಾಗ ಏನೇನು ನಡೆದಿದೆ ಯಾರಿಗೆ ಗೊತ್ತು?‌. ಬಿಜೆಪಿಯವರೇ ಆದ ಬಾಲಚಂದ್ರ ಜಾರಕಿಹೊಳಿ ಹನಿ ಟ್ರ್ಯಾಪ್ ಅಂತಾರೆ, ರಮೇಶ ಈ ಸಿಡಿಯಲ್ಲಿ ಇರೋದು ನಾನಲ್ಲ ಅಂತಾರೆ. ಹಾಗಾದರೆ, ಇರದ ಹಿಂದೆ ಇರೋದು ಯಾರು? ಇದು ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವ ಒಂದು ಭಾಗನಾ?.ಈ ಸರ್ಕಾರದಲ್ಲಿ ಅಭಿವೃದ್ಧಿಗೆ ದುಡ್ಡು ಕೇಳಬೇಕಾದರೆ ‘ಲಂಚ’ ಕೊಡಬೇಕು. ಕೆಲಸ ಏನಾದರೂ ಆಗಬೇಕೆಂದರೆ ‘ಮಂಚ’ ಹತ್ತಬೇಕು. ಇದೇನು ಲಂಚ, ಮಂಚದ ಸರ್ಕಾರನಾ ಅಂತಾ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು

ಸುದ್ದಿಗೋಷ್ಠಿಯಲ್ಲಿ ಶಾಸಕಿ ಕನೀಜ್ ಫಾತೀಮಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮನಕೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ್ ರಾಠೋಡ್, ಶರಣು ಮೋದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next