ಮಂಗಳೂರು: ಗುತ್ತಿಗೆದಾರ ಸಂತೋಷ್ ಪರ್ಸಂಟೇಜ್ ಕಮಿಷನಿಂದ ನೊಂದು ತನ್ನ ಆತ್ಮಹತ್ಯೆಗೆ ಈಶ್ವರಪ್ಪರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿರುವ ಕಾರಣ ಇದು ಹತ್ಯೆಗೆ ಸಮಾನವಾಗಿದ್ದು, ಸಚಿವ ಈಶ್ವರಪ್ಪಅವರನ್ನು ಸಂಪುಟದಿಂದ ಕಿತ್ತು ಹಾಕುವುದು ಮಾತ್ರವಲ್ಲದೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ರಮಾನಾಥ ರೈ ಒತ್ತಾಯಿಸಿದರು.
ಬುಧವಾರ ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಶ್ವರಪ್ಪ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದರು.
ಡಿವೈ ಎಸ್ಪಿ ಗಣಪತಿ ವಿಚಾರದಲ್ಲಿ ಕಾಂಗ್ರೆಸ್ ಪ್ರಕರಣದ ಸಿಬಿಐ ತನಿಖೆಗೆ ವಹಿಸಿತ್ತು. ಆರೋಪಿತರ ರಾಜೀನಾಮೆ ಪಡೆದಿತ್ತು. ಆದರೂ ಆಪ್ರಕರಣಕ್ಕೂ ಇದಕ್ಕೂ ಯಾವುದೇ ಹೋಲಿಕೆ ಮಾಡಲಾಗದು. ಮಾನಸಿಕವಾಗಿ ಯಾವುದೇ ಒತ್ತಡವಿಲ್ಲದ ಸಂತೋಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರ ಪ್ರಕರಣ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರಮಾನಾಥ ರೈ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮಂಗಳೂರು: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಎಸ್.ಡಿ.ಪಿ.ಐ
ನಾ ಖಾವೂಂಗಾ ನಾ ಖಾನೇ ದೂಂಗಾ ಎಂದು ಅಧಿಕಾರ ಬಂದವರು ಮೌನವಾಗಿದ್ದಾರೆ. 40 ಪರ್ಸಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಅದು ಚರ್ಚೆಯ ವಿಷಯ. ಆದರೆ ಪ್ರಧಾನಿ ನಿರ್ಲಕ್ಷ್ಯ ವಹಿಸಿದ್ದು ಇಂದು ಇಂತಹ ಸ್ಥಿತಿಗೆ ಕಾರಣವಾಗಿದೆ ಎಂದು ರೈ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ ಮೋಹನ್ ಪ್ರಧಾನ ಕಾರ್ಯದರ್ಶಿಗಳಾದ ಕೃಪಾ ಅಮರ್ ಆಳ್ವ, ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಜಯಶೀಲ ಅಡ್ಯಂತಾಯ, ಪುರುಷೋತ್ತಮ ಚಿತ್ರಾಪುರ, ಅಬ್ದುಲ್ ರವೂಫ್, ಅಶೋಕ್ ಡಿ.ಕೆ., ಉಮೇಶ್ ದಂಡಕೇರಿ, ಬೇಬಿ ಕುಂದರ್, ಮುಸ್ತಫ, ಶಬ್ಬೀರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.