Advertisement

ಸೋಲಿಗೆ ಹೆದರಿ ಕ್ಷೇತ್ರ ಬಿಟ್ಟು ಓಡಿ ಹೋಗಲ್ಲ

03:34 PM May 20, 2023 | Team Udayavani |

ಕೆ.ಆರ್‌.ಪೇಟೆ: ಸೋಲಿಗೆ ನಾನು ಹೆದರಿ ಕೆ.ಆರ್‌.ಪೇಟೆ ವಿಧಾನ ಸಭಾ ಕ್ಷೇತ್ರ ಬಿಟ್ಟು ಎಲ್ಲಿಗೂ ಓಡಿ ಹೋಗುವವನಲ್ಲ. ನನ್ನ ಅಳಿವು ಉಳಿವು ನನ್ನ ಜನ್ಮಭೂಮಿಯಾದ ಕೆ.ಆರ್‌ .ಪೇಟೆಯಲ್ಲಿ ಆಗಲಿದೆ. ನನ್ನ ರಾಜಕೀಯ ಜೀವನದಲ್ಲಿ ಸೋಲು, ಗೆಲುವು ಎರಡನ್ನೂ ನಾನು ಸಮಾನವಾಗಿ ಕಂಡಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡಿದ ಬಗ್ಗೆ ಆತ್ಮತೃಪ್ತಿಯಿದೆ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿ, ಕೆ.ಆರ್‌.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನಾನು ನೂತನ ಸರ್ಕಾರದಲ್ಲಿ ವ್ಯವಹರಿಸುವ ಜೊತೆಗೆ ಕ್ಷೇತ್ರದ ನೂತನ ಶಾಸಕರಿಗೆ ಸಹಕಾರ ನೀಡಲು ಬದ್ಧನಿದ್ದೇನೆ. ನನ್ನ ವಿರುದ್ಧ ಏಕ ವಚನದಲ್ಲಿ ಮಾತನಾಡಿ, ಸುಳ್ಳು ಆರೋಪಗಳನ್ನು ಮಾಡುತ್ತಿರುವ ಮಂಡ್ಯ ಹಾಲು ಒಕ್ಕೂಟದ ಡಾಲುರವಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ಆತನಿಗೆ ಬುದ್ಧಿ ಕಲಿಸುವುದು ಹೇಗೆಂದು ನನಗೆ ಗೊತ್ತಿದೆ ಎಂದರು.

ಗಲಾಟೆ, ಗದ್ದಲ ಮಾಡಲು ಬಿಡಲ್ಲ: ಕ್ಷೇತ್ರದಲ್ಲಿ ಗೂಂಡಾಗಿರಿ, ಗಲಾಟೆ, ಗದ್ದಲ ನಡೆಯಲು ನಾನು ಬಿಡಲ್ಲ. ನನ್ನ ಜೀವನದ ಕೊನೆಯ ಉಸಿರಿನವರೆಗೂ ಕ್ಷೇತ್ರದ ಜನರ ಸೇವಕನಂತೆ ಕೆಲಸ ಮಾಡುತ್ತೇನೆ. ನಾನು ಕೆ.ಆರ್‌.ಪೇಟೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾನು ಸತ್ತಾಗ ನನ್ನ ದೇಹವು ಮಣ್ಣಾಗುವುದು ಜನ್ಮಭೂಮಿಯ ಮಣ್ಣಿನಲ್ಲಿ ಎಂದು ಭಾವುಕರಾಗಿ ಹೇಳಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್‌, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್‌, ಪುರಸಭಾ ಸದಸ್ಯ ಬಸ್‌ ಸಂತೋಷ್‌ ಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಜವರಾಯಿ ಗೌಡ, ಬಂಡಿಹೊಳೆ ಅಶೋಕ್‌, ಚೋಕನಹಳ್ಳಿ ಪ್ರಕಾಶ್‌ ಮಾತನಾಡಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್‌, ಬೇಲದಕೆರೆ ಪಾಪೇಗೌಡ, ಹಾಪ್‌ ಕಾಮ್ಸ್‌ ಮಾಜಿ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಮುಖಂಡರಾದ ಬಿಗ್‌ ಬಾಸ್‌ ಮೋಹನ್‌, ಪುರಸಭೆ ಅಧ್ಯಕ್ಷೆ ಮಹಾದೇವಿ, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್‌, ಲತಾ ಮತಿಘಟ್ಟ, ನಂದಿನಿ, ಪುರಸಭಾ ಸದಸ್ಯರಾದ ಕೆ.ಎಸ್‌.ಪ್ರಮೋದ್‌, ಶುಭ ಗಿರೀಶ್‌, ಶೋಭಾ ದಿನೇಶ್‌, ಮೋದೂರು ಮಂಜು, ಜಾಗಿನಕೆರೆ ನಾರಾಯಣ, ಬಿಲ್ಲೇನಹಳ್ಳಿ ಕುಮಾರ್‌ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next