ಸಾಗರ: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಸಿಕ್ಕಿದೆ. ಮಹಿಳೆಯರು ಅಷ್ಟಕ್ಕೆ ತೃಪ್ತರಾಗದೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲೂ ತಮಗೆ ಶೇ. 50 ಮೀಸಲಾತಿ ದೊರಕಿಸಿಕೊಡುವಂತೆ ಹಕ್ಕೊತ್ತಾಯ ಮಂಡಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.
ಇಲ್ಲಿನ ಗಾಂಧಿಮಂದಿರದಲ್ಲಿ ಮಂಗಳವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಬಾಯಿಬಿಟ್ಟು ಕೇಳದೆ ಹೋದರೆ ಮೀಸಲಾತಿ ಪಡೆಯಲು ಶತಮಾನಗಳೇ ಬೇಕಾಗುತ್ತದೆ. ಮಹಿಳೆಯರ ಪರವಾಗಿ ಕಾನೂನು ರೂಪಿಸುವ ದೊಡ್ಡತನ ತೋರಿಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹಕ್ಕುಗಳು, ಸ್ತ್ರೀಶಕ್ತಿ ಸಂಘಟನೆಗಳಿಗೆ ಶಕ್ತಿ ತುಂಬಿದ್ದು ನಮ್ಮ ಪಕ್ಷ. ಇಂತಹ ಮಹಿಳಾ ದಿನಾಚರಣೆಗಳು ಸಾಂಕೇತಿಕವಾಗಬಾರದು. ಮಹಿಳೆಯರು ಅಡುಗೆಮನೆಗೆ, ತಮ್ಮ ಕುಟುಂಬಕ್ಕೆ ಸೀಮಿತವಾಗದೆ ಸಮಾಜದ ಬೆಳವಣಿಗೆಗೂ ಸಂಕಲ್ಪ ಕೈಗೊಳ್ಳಬೇಕು ಎಂದರು.
ಸಾಧಕ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ, ನಮ್ಮ ಭಾಗದ ಕೆಳದಿ ರಾಣಿ ಚೆನ್ನಮ್ಮ ನಮಗೆ ಮಾರ್ಗದರ್ಶನವಾಗಬೇಕು. ಸತಿಸಹಗಮನದಂತಹ ಕೆಟ್ಟಪದ್ಧತಿ ಇದ್ದರೂ ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ರಾಜ್ಯಾಡಳಿತ ವಹಿಸಿಕೊಂಡು 25 ವರ್ಷಕ್ಕೂ ಹೆಚ್ಚುಕಾಲ ದಿಟ್ಟವಾಗಿ ಆಡಳಿತ ನಡೆಸಿದ ಕೆಳದಿ ರಾಣಿ ಚೆನ್ನಮ್ಮ ನಮಗೆ ಆದರ್ಶಪ್ರಾಯಳಾಗಬೇಕು. ಎಲ್ಲ ಕ್ಷೇತ್ರದ ಹೊಣೆಗಾರಿಕೆ ಹೊತ್ತಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಗುರುತಿಸಿಕೊಳ್ಳಬೇಕು. ಮಹಿಳೆಯರಿಂದ ಮಾತ್ರ ಶುದ್ಧ ಮತ್ತು ಸದೃಢ ಆಡಳಿತ ನೀಡಲು ಸಾಧ್ಯ. ಲಿಂಗ ಸಮಾನತೆ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷತೆ ಮಧುಮಾಲತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಬಿ.ಆರ್.ಜಯಂತ್, ಸುರೇಶಬಾಬು, ಮಂಡಗಳಲೆ ಗಣಪತಿ, ಕೆ.ಹೊಳೆಯಪ್ಪ, ಎನ್.ಲಲಿತಮ್ಮ, ಸುಮಂಗಲ ರಾಮಕೃಷ್ಣ, ಉಷಾ, ಸರಸ್ವತಿ ನಾಗರಾಜ್, ನಂದಾ ಗೊಜನೂರು, ಪ್ರಭಾವತಿ, ಶ್ವೇತಾ, ತೀ.ನ.ಶ್ರೀನಿವಾಸ್, ಪರಿಮಳ ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತೆಯರಿಗೆ, ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನ ಮಾಡಲಾಯಿತು.