ಗಂಗಾವತಿ: ಬಿಜೆಪಿ ಜಾತಿ, ಧರ್ಮ ಹಾಗೂ ಹಣ ಬಲದಲ್ಲಿ ಅಧಿಕಾರಕ್ಕೆ ಬಂದಿದೆ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಆಗಿದ್ದು, ದೇಶದ ಸರ್ವ ಜನಾಂಗದ ಏಳ್ಗೆಗಾಗಿ ಅಭಿವೃದ್ಧಿ ಚಿಂತನೆಯ ನಾಯಕರಿರುವ ಪಕ್ಷವಾಗಿದ್ದು ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನತೆ ರೋಸಿ ಹೋಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಸೂಕ್ತ ಉತ್ತರ ನೀಡಲಿದ್ದು ಜನರನ್ನು ಧರ್ಮ, ಜಾತಿ ಹೆಸರಿನಲ್ಲಿ ದಾರಿ ತಪ್ಪಿಸಲು ಪದೇ ಪದೇ ಆಗುವುದಿಲ್ಲ ಎಂದು ಬಿಜೆಪಿ ಪಕ್ಷಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಟೀಕಿಸಿದರು.
ಅವರು ನಗರದ ಗಾಂಧಿ ನಗರ ಉಪ್ಪಾರ ಓಣಿಯಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಮೆರವಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಣ ಇದ್ದವರು ಪಕ್ಷ ಕಟ್ಟಿ ಬಣ್ಣದ ಮಾತುಗಳನ್ನಾಡಿ ಕೋಟ್ಯಾಂತರ ರೂ.ಗಳ ಭರವಸೆ ನೀಡುತ್ತಿದ್ದು, ಎಲ್ಲಿಯೂ ಹಣ ನೀಡದೇ ಬರೀ ಮಾತನಾಡುವವರನ್ನು ಮತದಾರರು ನಂಬಬಾರದು. ಸಂತೆ ಮುಗಿಸಿಕೊಂಡು ತಿರುಗಿ ನೋಡದವರನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸಬೇಕು ಎಂದರು.
ಬಿಜೆಪಿ ಆಡಳಿತದಲ್ಲಿ ಭ್ರಷ್ಠಾಚಾರ ಮತ್ತು ಜನಸಾಮಾನ್ಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು, ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ನಿರಂತರವಾಗಿ ಜನರಿಗೆ ಸುಳ್ಳು ಹೇಳುವ ಮೂಲಕ ಮರಳು ಮಾಡುವುದನ್ನು ಬಿಡಬೇಕು. ಅಭಿವೃದ್ಧಿ ವಿಷಯವಿಟ್ಟುಕೊಂಡು ಬಹಿರಂಗ ಭಾಷಣ ಮಾಡದೇ ಪದೇ ಪದೇ ಜಾತಿ, ಧರ್ಮ ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದ್ದಾರೆ. ಇವರನ್ನು ಜನತೆ ಕ್ಷಮಿಸಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯಾರ್, ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಲ್ಲೇಶ ದೇವರಮನಿ, ದೇವು, ಕಿಂಗ್, ತಿಮ್ಮಣ್ಣ ಪೂಜಾರಿ, ಅಭಿ, ದುರುಗಪ್ಪ ಹೊಸ್ಕರಿ, ರಾಜಪ್ಪ ಅಳ್ಳಳ್ಳಿ, ಶಿವಪ್ಪ ಸೇರಿ ಅನೇಕರಿದ್ದರು. ವಾರ್ಡಿನ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣ ಗೆ ಮಾಡಿ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರವನ್ನು ಜೆಸಿಬಿ ಮೂಲಕ ಸಮರ್ಪಿಸಿದರು.