Advertisement

ಜಾರ್ಜ್‌ ಚಿತಾಭಸ್ಮ ಹುಟ್ಟೂರಲ್ಲಿ  ದಫನ

12:30 AM Feb 03, 2019 | |

ಮಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರ ಚಿತಾಭಸ್ಮವನ್ನು ಅವರ ಹುಟ್ಟೂರು ಮಂಗಳೂರಿನ ಮಾತೃಚರ್ಚ್‌ ಬಿಜೈ ಸಂತ ಫ್ರಾನ್ಸಿಸ್‌ ಝೇವಿಯರ್‌ ಚರ್ಚ್‌ನ ಸಿಮೆಟ್ರಿಯಲ್ಲಿ ಶನಿವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ದಫನ ಮಾಡಲಾಯಿತು.

Advertisement

ಜಾರ್ಜ್‌ ಫೆರ್ನಾಂಡಿಸ್‌ ಅವರ ಚಿತಾಭಸ್ಮದ ಕರಂಡಿಕೆಯನ್ನು ಅವರ ಸಹೋದರ ಮೈಕಲ್‌ ಫೆರ್ನಾಂಡಿಸ್‌ ಮತ್ತು ಮುಂಬಯಿಯ ಕಾರ್ಮಿಕ ನಾಯಕ ಫೆಲಿಕ್ಸ್‌ ಡಿ’ಸೋಜಾ ಅವರು ಬಿಜೈ ಚರ್ಚಿನ ಪ್ರಧಾನ ಧರ್ಮಗುರು ಫಾ| ವಿಲ್ಸನ್‌ ವೈಟಸ್‌ ಡಿ’ಸೋಜಾ ಅವರಿಗೆ ಹಸ್ತಾಂತರ ಮಾಡಿದರು. ಬಳಿಕ ಚಿತಾಭಸ್ಮದ ಕರಂಡಿಕೆಯನ್ನು ಚರ್ಚ್‌ನಲ್ಲಿರಿಸಿ ಪ್ರಾರ್ಥನೆ ನೆರವೇರಿಸಲಾಯಿತು.

ಫಾ| ವಿಲ್ಸನ್‌ ವೈಟಸ್‌ ಡಿ’ಸೋಜಾ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನ ನೆರವೇರಿತು. ಲೂರ್ಡ್ಸ್‌ ಸೆಂಟ್ರಲ್‌ ಸ್ಕೂಲ್‌ನ ಪ್ರಾಂಶುಪಾಲ ಫಾ| ರಾಬರ್ಟ್‌ ಡಿ’ಸೋಜಾ ಮಾತನಾಡಿ, ಜಾರ್ಜ್‌ ಅವರ ವ್ಯಕ್ತಿತ್ವ ಹಾಗೂ ದೇಶ ಹಾಗೂ ಸಮಾಜಕ್ಕೆ ಅವರು ಸಲ್ಲಿಸಿದ ಸೇವೆಯನ್ನು ವಿವರಿಸಿದರು. ಜಾರ್ಜ್‌ ಅವರು ರಾಜಕಾರಣದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಆದರ್ಶರಾಗಿ ಬಾಳಿದ್ದಾರೆ ಎಂದರು.

ದೇರೆಬೈಲ್‌ ಚರ್ಚಿನ ಪ್ರಧಾನ ಧರ್ಮಗುರು ಫಾ| ಆಸ್ಟಿನ್‌ ಪೆರಿಸ್‌, ಬಿಜೈಯ ಸಹಾಯಕ ಧರ್ಮಗುರು ಫಾ| ವಿನೋದ್‌ ಲೋಬೋ, ನಿವೃತ್ತ ಧರ್ಮಗುರು ಫಾ| ಸಂತೋಷ್‌ ಕಾಮತ್‌, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಆಡಳಿತಾ ಕಾರಿ ಫಾ| ಅಜಿತ್‌ ಮಿನೇಜಸ್‌, ಭಾರತೀಯ ಕೆಥೋಲಿಕ್‌ ಯುವ ಸಂಚಾಲನದ ನಿರ್ದೇಶಕ ಫಾ| ರೊನಾಲ್ಡ್‌ ಪ್ರಕಾಶ್‌ ಡಿ’ಸೋಜಾ, ಫಾ| ಸಿಪ್ರಿಯನ್‌ ಕಪುಚಿನ್‌, ಅಸ್ಸಿಸಿ ಪ್ರಸ್‌ನ ನಿರ್ದೇಶಕ ಫಾ| ಮ್ಯಾಕ್ಸಿಂ ಕಾಪುಚಿನ್‌ ಪ್ರಾರ್ಥನಾ ವಿ ಧಿಯಲ್ಲಿ ಭಾಗವಹಿಸಿದ್ದರು.

ಚಿತಾಭಸ್ಮದ ಕರಂಡಿಕೆಗೆ ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಭಾಸ್ಕರ ಕೆ., ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರಾದ ಲ್ಯಾನ್ಸಿ ಲಾಟ್‌ ಪಿಂಟೋ, ಪ್ರಕಾಶ್‌ ಸಾಲ್ಯಾನ್‌, ಮಾಜಿ ಶಾಸಕರಾದ ಯೋಗೀಶ್‌ ಭಟ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ರಾಷ್ಟ್ರೀಯ ವಾದಿ ಕ್ರೈಸ್ತರ ವೇದಿಕೆ ಸಂಚಾಲಕ ಫ್ರಾÂಂಕ್ಲಿನ್‌ ಮೊಂತೆರೊ ಮತ್ತಿತರರು ಪುಷ್ಪನಮನ ಸಲ್ಲಿಸಿದರು.

Advertisement

ಬಳಿಕ ಕರಂಡಿಕೆಯನ್ನು ದಫ‌ನ ಸ್ಥಳಕ್ಕೆ ಕೊಂಡೊಯ್ದು ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಚಿತಾಭಸ್ಮ ಕರಂಡಿಕೆಯನ್ನು ಪೆಟ್ಟಿಗೆಯಲ್ಲಿ ಇರಿಸಿ ಅಂತಿಮ ಗೌರವ ಸಲ್ಲಿಸಿ ದಫನ ಮಾಡಲಾಯಿತು.

ಮಂಗಳೂರಿನಲ್ಲಿ ಪ್ರಥಮ
ಕ್ರೈಸ್ತ ಸಮುದಾಯದ ಮಹನೀಯರ ಚಿತಾಭಸ್ಮವನ್ನು ದಫನ ಮಾಡುವ ಪ್ರಕ್ರಿಯೆ ಮಂಗಳೂರಿನಲ್ಲಿ ನಡೆಯುತ್ತಿರುವುದು ಇದೇ ಪ್ರಥಮ ಎನ್ನಲಾಗಿದೆ.

ಜಾರ್ಜ್‌ ಆಶಯದಂತೆ
ಜಾರ್ಜ್‌ ಅವರ ಮೈಕಲ್‌ ಡಿ’ಸೋಜಾ ಅವರು ಮಾತನಾಡಿ, ಜಾರ್ಜ್‌ ಅವರು ಆದರ್ಶ ರಾಜಕಾರಣಿಯಾಗಿ ಮನೆ ಮಾತಾಗಿದ್ದಾರೆ. ಹೊಸದಿಲ್ಲಿಯ ಚರ್ಚ್‌ ಬಳಿಕ ಈಗ ಮಂಗಳೂರು ಚರ್ಚ್‌ನಲ್ಲಿ ಜಾರ್ಜ್‌ ಅವರ ಆಶಯದಂತೆ ಚಿತಾಭಸ್ಮ ದಫನ ನಡೆಸಲಾಗುತ್ತಿದೆ. ರಾಜ್ಯದ ನಾನಾ ಕಡೆಗಳಿಂದ ಚಿತಾಭಸ್ಮವನ್ನು ನೀಡುವಂತೆ ಕೋರಿಕೆಗಳು ಬರುತ್ತಿವೆ ಎಂದರು.

ರಸ್ತೆಗೆ ಜಾರ್ಜ್‌ ಹೆಸರು
ಜಾರ್ಜ್‌ ಫೆರ್ನಾಂಡಿಸ್‌ ಸಹೋದರ ಮೈಕಲ್‌ ಫೆರ್ನಾಂಡಿಸ್‌ ಮಾತನಾಡಿ, ಜಾರ್ಜ್‌ ಅವರ ಹೆಸರನ್ನು ನಗರದ ಒಂದು ಪ್ರಮುಖ ರಸ್ತೆಗೆ ಇಡುವಂತೆ ಕೋರಿದರು. ಕಾರ್ಪೊರೇಟರ್‌ ಲ್ಯಾನ್ಸ್‌ ಲಾಟ್‌ ಪಿಂಟೋ ಮಾತನಾಡಿ, ಜಾರ್ಜ್‌ ಅವರ ಅಜ್ಜಿಯ ಮನೆ ಇರುವ ಬಿಜೈ ನ್ಯೂರೋಡ್‌ಗೆಹೆಸರು ಇಡುವ ಬಗ್ಗೆ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಠರಾವು ಮಂಡಿಸಲಾಗಿದೆ. ನಗರದ ಪ್ರಮುಖ ರಸ್ತೆಗೆ ಅವರ ಹೆಸರು ಇಡುವಂತೆ ಮೈಕಲ್‌ ಫೆರ್ನಾಂಡಿಸ್‌ ಮಾಡಿರುವ ಕೋರಿಕೆಯ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು. 

ಹುಟ್ಟೂರ ಶ್ರದ್ಧಾಂಜಲಿ
ಮಂಗಳೂರು:
ಜಾರ್ಜ್‌ ಫೆರ್ನಾಂಡಿಸ್‌ ಜೀವನದುದ್ದಕ್ಕೂ ನ್ಯಾಯ ಕ್ಕಾಗಿ ಹೋರಾಟ ನಡೆಸಿದ ಶ್ರೇಷ್ಠ ಹೋರಾಟಗಾರ. ದೇಶದ ಜನತೆಗೆ ಶಾಂತಿ, ನೆಮ್ಮದಿ, ಗೌರವದ ಜೀವನ ದೊರೆಯುವುದೇ ಅಭಿವೃದ್ಧಿ ಎಂದು ನಂಬಿದ್ದ ಅವರು ಮಾದರಿ ವ್ಯಕ್ತಿ ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಹೇಳಿದರು.

ಸಿಟಿಜನ್ಸ್‌ ಕೌನ್ಸಿಲ್‌ ಮಂಗಳೂರು ಘಟಕ ವತಿಯಿಂದ ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಶನಿವಾರ “ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ ಸಭೆ’ಯಲ್ಲಿ ಅವರು ನುಡಿನಮನ ಸಲ್ಲಿಸಿದರು.

ನಿಟ್ಟೆ ಸಮೂಹ ಸಂಸ್ಥೆ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಮಾತನಾಡಿ, ಜಾರ್ಜ್‌ ಅವರದ್ದು ಬಂಡಾಯದ ಗುಣ. ಜೈಲಿನಿಂದ ಚುನಾವಣೆ ಎದುರಿಸಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿರುವುದು ಅವರ ಜನಪ್ರಿಯತೆಯ ದ್ಯೋತಕ ಎಂದರು.

ಜಾರ್ಜ್‌ ಫೆರ್ನಾಂಡಿಸ್‌ ಸಹೋದರ ಮೈಕಲ್‌ ಫೆರ್ನಾಂಡಿಸ್‌ ಮಾತನಾಡಿ, ಜಾರ್ಜ್‌ ಸಚಿವರಾಗಿದ್ದ ವೇಳೆ ನಮಗೆ ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿತ್ತು. ಆದರೆ ನಾವು ಒಂದು ಪೈಸೆಯನ್ನೂ ಮುಟ್ಟಿಲ್ಲ. ಜಾರ್ಜ್‌ ಅವರ ಆಸ್ತಿಗಾಗಿ ಸಹೋದರರು ಕಿತ್ತಾಡಿಕೊಂಡಿದ್ದೇವೆ ಎಂಬುದೂ ತಪ್ಪು ಎಂದು ತಿಳಿಸಿದರು.

ಮಂಗಳೂರಿನ ಹೆಮ್ಮೆ
ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್‌ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಜಾರ್ಜ್‌ ಅವರು ದ.ಕ. ಜಿಲ್ಲೆಯ ಕೀರ್ತಿಯನ್ನು ಜಗತ್ತಿನ ಎತ್ತರಕ್ಕೆ ಏರಿಸಿದ ಸಾಧಕ. ಯುವ ರಾಜಕಾರಣಿಗಳಿಗೆ ಅವರು ಮಾದರಿ. ಅವರು ಮಂಗಳೂರಿನ ಹೆಮ್ಮೆ ಎಂದರು.

ಮೇಯರ್‌ ಭಾಸ್ಕರ ಕೆ., ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿತ್ಯಾನಂದ, ಫೆಲಿಕ್ಸ್‌ ಡಿ’ಸೋಜಾ, ಪ್ರಮುಖರಾದ ಮೋನಪ್ಪ ಭಂಡಾರಿ, ರಾಮಚಂದರ್‌ ಬೈಕಂಪಾಡಿ, ಎಂ.ಬಿ. ಸದಾಶಿವ ಉಪಸ್ಥಿತರಿದ್ದರು. ಟಿಜನ್‌ ಕೌನ್ಸಿಲ್‌ ಅಧ್ಯಕ್ಷ ಚಿದಾನಂದ ಕೆದಿಲಾಯ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next