ಚನ್ನಪಟ್ಟಣ: ನಾನು ಹಲವು ಬಾರಿ ಈ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನೀರಾವರಿ ತಂದವನು ನಾನು. ಆದರೂ, ಸ್ವಾಭಿಮಾನವುಳ್ಳ ಜನತೆ, ನನ್ನನ್ನು ಬಿಟ್ಟು ವಲಸೆ ಬಂದವರನ್ನು ಹೇಗೆ ಆಯ್ಕೆ ಮಾಡಿದಿರಿ ಎಂದು ಮತದಾರರನ್ನು ಪ್ರಶ್ನೆ ಮಾಡಬೇಕಿದೆ. ಹಾಗಾಗಿ ಸ್ವಾಭಿಮಾನಿ ಸಂಕಲ್ಪ ನಡಿಗೆ ಹಮ್ಮಿಕೊಂಡಿದ್ದೇನೆ’ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಐತಿಹಾಸಿಕ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಬಳಿ ಉತ್ತರ ಪಡೆಯಲು ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದೇನೆ. 2 ತಿಂಗಳ ಕಾಲ ಇಡೀ ಕ್ಷೇತ್ರದ ಮನೆಮನೆಗೆ ತೆರಳುತ್ತೇನೆ. ಕುಮಾರಸ್ವಾಮಿ ಅವರ ದುರಾಡಳಿತದ ಬಗ್ಗೆ ಮನವರಿಕೆ ಮಾಡುತ್ತೇನೆ. ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಏನು? ಅವರು ಎಷ್ಟು ದಿನ ಕ್ಷೇತ್ರದಲ್ಲಿ ಓಡಾಡಿದ್ದಾರೆ ಎಂಬುದರ ಬಗ್ಗೆ ತಿಳಿಸುತ್ತೇವೆ ಎಂದರು.
ಚನ್ನಪಟ್ಟಣಕ್ಕೆ 1,500 ಕೋಟಿ ರೂ.ಅನುದಾನ ತಂದಿದ್ದೇವೆ ಅಂತ ಎಚ್‌ಡಿಕೆ ಹೇಳಿದ್ದಾರೆ. ಆದರೆ, ಆ ಹಣ ಏನಾಯಿತು? ಜನರ ಕಣ್ಣಿಗೆ ಕಾಣ್ತಿಲ್ಲ. ತಾಲೂಕಿನಲ್ಲಿ ಕುಮಾರಸ್ವಾಮಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದ ಯೋಗೇಶ್ವರ್, ಈ ಬಾರಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದನ್ನು ಸ್ಪಷ್ಟ ಪಡಿಸಿದ್ದಾರೆ ಎಂದರು.