ತುಮಕೂರು/ಬೆಂಗಳೂರು: ಮಾಜಿ ಸಚಿವ, ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಚೆನ್ನಿಗಪ್ಪ (74) ಅವರು ಶುಕ್ರವಾರ ಬೆಳಗ್ಗೆ 8.20ರ ಸುಮಾರಿಗೆ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸಾಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾ ಗದೆ ಅವರು ಅಸುನೀಗಿದ್ದಾರೆ. ಮೃತರು ಪುತ್ರರಾದ ಶಾಸಕ ಡಿ.ಸಿ ಗೌರಿಶಂಕರ್, ಮಾಜಿ ಜಿ.ಪಂ.ಸದಸ್ಯ ಡಿ.ಸಿ.ವೇಣುಗೋಪಾಲ್, ಪತ್ನಿ, ಪುತ್ರಿ, ಸಹೋದರರನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹುಟ್ಟೂರಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿ ಮಜರೆ ಗ್ರಾಮ ದೊಡ್ಡಹುಚ್ಚಯ್ಯನ ಪಾಳ್ಯದ ಕೃಷಿಕರಾದ ಚಿನ್ನಮ್ಮ, ಚನ್ನರಾಯಪ್ಪ ಅವರ ಎರಡನೇ ಪುತ್ರರಾಗಿ ಜನಿಸಿದ ಚನ್ನಿಗಪ್ಪ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ, ಬಿಎ, ಬಿಇಡಿ ಪದವಿಯನ್ನು ಮಾಡಿದರು. ನಂತರ, ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಪ್ರಾರಂಭಿಸಿ, ನಂತರ ಕೆಲಸಕ್ಕೆ ರಾಜಿನಾಮೆ ನೀಡಿ, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದರು.
ಹ್ಯಾಟ್ರಿಕ್ ಗೆಲುವು: ದೇವೇಗೌಡರ ಸಂಪರ್ಕಕ್ಕೆ ಬಂದ ಬಳಿಕ, ರಾಜಕೀಯ ಜೀವನ ಪ್ರಾರಂಭಿಸಿ, 1993, 98, 2003ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾದರು. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ರೇಷ್ಮೆ ಖಾತೆ ಸಚಿವರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ವಿವಿಧ ಖಾತೆಗಳ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.