ಹೊಸಪೇಟೆ: ನಗರ ಸೇರಿದಂತೆ ತಾಲೂಕಿನ ಗ್ರಾಮಗಳಿಗೆ ಇಲ್ಲಿನ ಜಲಶುದ್ಧಿಕರಣ ಘಟಕದಿಂದ ಕುಡಿಯುವ ಸರಬರಾಜು ಮಾಡುತ್ತಿದ್ದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುವಂತೆ ಶಾಸಕ ಎಚ್.ಆರ್.ಗವಿಯಪ್ಪ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿರುವ ಕ್ರಮ ಖಂಡಿಸಿ ಮಾಜಿ ಸಚಿವ ಆನಂದ ಸಿಂಗ್ ನಡು ರಸ್ತೆಯಲ್ಲಿ ಧರಣಿ ಕುಳಿತ ಘಟನೆ ರವಿವಾರ ನಡೆಯಿತು.
ಶಾಸಕ ಗವಿಯಪ್ಪ ಜತೆ ದೂರವಾಣಿಯಲ್ಲಿ ಮಾತನಾಡಿದ ಆನಂದ ಸಿಂಗ್, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
2004ರಿಂದಲೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ತಮ್ಮ ಆದೇಶ ವಾಪಸ್ ಪಡೆಯಬೇಕೆಂದರು. ಇದಕ್ಕೆ ಗವಿಯಪ್ಪ ನಿರಾಕರಿಸಿದ್ದರಿಂದ ಸಿಟ್ಟಾದ ಆನಂದ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ರಸ್ತೆಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೌರಾಯುಕ್ತ ಚಂದ್ರಪ್ಪ ಅವರನ್ನು ಆನಂದ ಸಿಂಗ್ ತರಾಟೆಗೆ ತೆಗೆದುಕೊಂಡರು. ಸೋಮವಾರ ತುರ್ತು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ನಗರಸಭೆ ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿಗೆ 20 ಸದಸ್ಯರ ಬಲವಿದ್ದರೆ, ಕಾಂಗ್ರೆಸ್‌ಗೆ 15 ಸದಸ್ಯರ ಬಲವಿದೆ. ಆದರೆ, ಬಹುತೇಕ ಸದಸ್ಯರು ಟ್ಯಾಂಕರ್ ನೀರು ಪೂರೈಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.