ಬೆಂಗಳೂರು: ಕಳೆದ ಎರಡು ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಪಿ.ಸಿ.ಅಲೆಕ್ಸಾಂಡರ್, ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ನಡುವೆ ಹಿರಿಯ ನಾಯಕರ ಪೈಪೋಟಿ ನಡುವೆಯೂ ಅಲ್ಪಸಂಖ್ಯಾತರ ಕೊಟಾದಲ್ಲಿ ಟಿಕೆಟ್ ಪಡೆದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮುನಿಸಿಕೊಂಡ ನಾಯಕರನ್ನು ಸಮಾಧಾನ ಪಡಿಸುವ ಕಸರತ್ತು ಮುಂದುವರೆಸಿದ್ದಾರೆ.
ಸೋಮವಾರ ಮುಸ್ಲಿಂ ಸಮುದಾಯದ ಹಿರಿಯ ನಾಯಕ ರೋಷನ್ ಬೇಗ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೇ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕ್ರಿಶ್ಚಿಯನ್ ಸಮುದಾಯದ ಮುಖಂಡ ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ಟಿಕೆಟ್ ಸಿಗದಿರುವುದರಿಂದ ಮುನಿಸಿಕೊಂಡಿದ್ದು, ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಬೇಸರಗೊಂಡಿರುವ ಎಚ್.ಟಿ.ಸಾಂಗ್ಲಿಯಾನ ಅವರನ್ನು ಸಮಾಧಾನ ಪಡಿಸಲು ರಿಜ್ವಾನ್ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಅವರ ಭೇಟಿಗೆ ಪ್ರಯತ್ನ ನಡೆಸಿದರೂ, ಸಾಂಗ್ಲಿಯಾನ, ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.
ಅದೇ ಸಮುದಾಯದ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಮೂಲಕವೂ ರಿಜ್ವಾನ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಅವರು ಬೆಂಗಳೂರಿನಿಂದ ಹೊರಗೆ ಇರುವುದರಿಂದ ಕ್ರಿಶ್ಚಿಯನ್ ಸಮುದಾಯದ ಮುಖಂಡರ ಮನವೊಲಿಸುವ ಪ್ರಯತ್ನವನ್ನು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮೂಲಕ ನಡೆಸಿದ್ದಾರೆ.