ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಇಂಥ ಸಂದರ್ಭದಲ್ಲಿ ಕ್ರಿಕೆಟಿಗರು ನೆರವಿಗೆ ಧಾವಿಸಬೇಕು ಎಂಬ ಆಶಯ ಹೊತ್ತ ಮಾಜಿ ಆಟಗಾರ, ಲಂಕೆಯ 1996ರ ವಿಶ್ವಕಪ್ ಹೀರೋ ರೋಶನ್ ಮಹಾನಾಮ ಸ್ವತಃ ಅಖಾಡಕ್ಕೆ ಧುಮುಕಿದ್ದಾರೆ.
ಪೆಟ್ರೋಲ್ ಬಂಕ್‌ಗಳಲ್ಲಿ ಮೈಲುದ್ದದ ಸರತಿ ಸಾಲಿನಲ್ಲಿ ನಿಂತ ಗ್ರಾಹಕರಿಗೆ ಚಹಾ, ಬನ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಚಿತ್ರಗಳನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ದಿನದಿಂದ ದಿನಕ್ಕೆ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಕ್ಯೂ ಬೆಳೆಯುತ್ತಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಇದರಿಂದ ಗ್ರಾಹಕರ ಆರೋಗ್ಯ ಹದಗೆಡುತ್ತಿದೆ. ಹೀಗೆ ಸರತಿ ಸಾಲಲ್ಲಿ ನಿಂತವರಿಗೆ ದಯವಿಟ್ಟು ಸಹಾಯ ಮಾಡಿ’ ಎಂದು ಮಹಾನಾಮ ಟ್ವೀಟ್ ಮಾಡಿದ್ದರು. ಇದೀಗ ಸ್ವತಃ ಅವರೇ ಈ ಕೆಲಸದ ಮೂಲಕ ಮಾದರಿಯಾಗಿದ್ದಾರೆ.
ವಿಜೇರಾಮ ಮಠ ಹಾಗೂ ವಾರ್ಡ್‌ಪ್ಲೇಸ್ ಸುತ್ತಮುತ್ತಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಹಾಮಾನ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿದ ಈ ಮಾಜಿ ಕ್ರಿಕೆಟಿಗನೇ ನಿಜವಾದ ಹೀರೋ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತೈಲವನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಹೆಣಗಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತೈಲ ದಾಸ್ತಾನು ಮುಗಿಯುವ ಸಂಭವವಿದೆ. ಹೀಗಾಗಿ ಜನರು ಸರತಿ ಸಾಲಲ್ಲಿ ನಿಂತು ಪೆಟ್ರೋಲ್, ಡೀಸೆಲ್ ಖರೀದಿಸುತ್ತಿದ್ದಾರೆ.
ಓಪನರ್ ರೋಶನ್ ಮಹಾನಾಮ 52 ಟೆಸ್ಟ್ ಹಾಗೂ 213 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ.