Advertisement

ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಕ್ಯಪದವು ಇನ್ನಿಲ್ಲ

11:56 AM Jun 27, 2021 | Team Udayavani |

ಪುಂಜಾಲಕಟ್ಟೆ: ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ  ಶೆಟ್ಟಿ  ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ  ನಿಧನ ಹೊಂದಿದರು.

Advertisement

ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಜಯ ಶೆಟ್ಟಿ ಅವರು ಉದಯವಾಣಿಯಿಂದ ಕುಗ್ರಾಮವೆಂದು ಗುರುತಿಸಿದ್ದ ಉಳಿ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಗಳ ಮಧ್ಯೆ ಉತ್ತಮ ಕೃಷಿ ಸಾಧನೆ ಮಾಡಿದ್ದರು. ಕಂಬಳಕ್ಷೇತ್ರದಲ್ಲಿ ಓಟಗಾರರರಾಗಿ ಪ್ರಖ್ಯಾತಿ ಪಡೆದಿದ್ದ ಅವರು ಕಂಬಳ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಹಲವಾರು ಪ್ರಶಸ್ತಿ, ಸಮ್ಮಾನ ಪಡೆದಿದ್ದರು.

ಇದನ್ನೂ ಓದಿ:  ಜಮ್ಮು ವಾಯು ಪಡೆ ನಿಲ್ದಾಣದ ಮೇಲೆ ಡ್ರೋನ್ ಬಾಂಬ್ ದಾಳಿ ಶಂಕೆ

ಸುಮಾರು 70 ರ ದಶಕದ ಆರಂಭದಲ್ಲಿ ಕಕ್ಯಪದವು ಡೀಕಯ್ಯ ಪೂಜಾರಿ, ಪುಣ್ಕೆದಡಿ ಅಣ್ಣು ಭಂಡಾರಿ ಅವರ ಕೋಣಗಳನ್ನು ಓಡಿಸುತ್ತಿದ್ದ ಅವರು ಬಳಿಕ ಕಾಡಬೆಟ್ಟು ದಿ.ನಾರಾಯಣ ರೈಅವರ ಕೋಣಗಳನ್ನು ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸುತ್ತಿದ್ದು, ಸುಮಾರು ಒಂದೂವರೆ ದಶಕಗಳ ಕಾಲ ನಿರಂತರ ಪದಕ ಪಡೆದು ನಂಬರ್ ಒನ್ ಸ್ಥಾನದಲ್ಲಿ ವಿರಾಜಿಸಿದ್ದರು. ಆದರೆ ಯಾವುದೇ ಸಂಭಾವನೆ ಪಡೆಯದೆ ಕಂಬಳದ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿತ್ತು.ಸ್ವಾಮಿ ನಿಷ್ಠ  ಓಟಗಾರ ಎಂಬ ಗೌರವ ಪಡೆದಿದ್ದರು. ಯುವ ಓಟಗಾರರಿಗೆ ಮಾರ್ಗದರ್ಶಕರಾಗಿದ್ದರು.

Advertisement

ಅವರು 5ವರ್ಷ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದರು. ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ, ಉಳಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ಬ್ರಹ್ಮ ಬದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಮತ್ತು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುತ್ತಿರುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಿತಿಯ ಗೌರವ ಸಲಹೆಗಾರರಾಗಿದ್ದರು. ಸ್ಥಳೀಯವಾಗಿ ಕೊಡುಗೈ ದಾನಿಯಾಗಿದ್ದರು.

ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಕಂಬಳ ಕ್ಷೇತ್ರ ಕಂಬನಿ ಮಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next