ನವದೆಹಲಿ : ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್ ಮಲ್ಹೋತ್ರಾ(94) ಅನಾರೋಗ್ಯದ ಕಾರಣದಿಂದ ದೆಹಲಿಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಜಗಮೋಹನ್ ಮಲ್ಹೋತ್ರಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಜಗಮೋಹನ್ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ದೇಶದ ಮಾದರಿ ಆಡಳಿತಗಾರ ಮತ್ತು ಮೇಧಾವಿಯಾಗಿದ್ದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಹೊಸ ನೀತಿಗಳ ಮೂಲಕ ಗುರುತಿಸಿಕೊಂಡಿದ್ದರು. ಜಗಮೋನ್ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಜಗಮೋಹನ್ ಅವರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಶ್ರೀ (1971), ಪದ್ಮಭೂಷಣ (1977) ಮತ್ತು ಪದ್ಮ ವಿಭೂಷಣ (2016) ಗೌರವಗನ್ನು ನೀಡಿ ಗೌರವಿಸಿದೆ. 1927 ಸೆಪ್ಟೆಂಬರ್ 25ರಂದು ಜನಿಸಿದ ಜಗಮೋಹನ್, 1996ರಲ್ಲಿ ಮೊದಲ ಸಲ ಸಂಸದರಾಗಿ ಆಯ್ಕೆಯಾಗಿದ್ದರು. ಜಮ್ಮು ಕಾಶ್ಮೀರ, ಗೋವಾದ ರಾಜ್ಯಪಾಲರಾಗಿ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿಯ ಅವರು ಕಾರ್ಯನಿರ್ವಹಿಸಿದ್ದರು.