Advertisement

ಮಾಜಿ ನಾಯಕ ಸರ್ದಾರ್‌ ಸಿಂಗ್‌ ನಿವೃತ್ತಿ

06:30 AM Sep 13, 2018 | |

ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್‌ ತನ್ನ ಮಹೋನ್ನತ ಹಾಕಿ ಬಾಳ್ವೆಯಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ಕಳೆದ 12 ವರ್ಷಗಳಿಂದ ಹಾಕಿ ಆಟ ಆಡಿದ್ದೇನೆ ಮತ್ತು ಯುವ ಆಟಗಾರರು ಹಾಕಿ ಆಟವಾಡಲು ಸಮಯ ಬಂದಿದೆ ಎಂದವರು ಹೇಳಿದ್ದಾರೆ.

Advertisement

ಜಕಾರ್ತಾ ಏಶ್ಯನ್‌ ಗೇಮ್ಸ್‌ನ ನಿರಾಶಾದಾಯಕ ನಿರ್ವಹಣೆಯ ಬಳಿಕ ಸರ್ದಾರ್‌ ನಿವೃತ್ತಿಯಾಗಲು ನಿರ್ಧರಿಸಿದರು. ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಉಳಿಸಿಕೊಳ್ಳಲು ವಿಫ‌ಲವಾದ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.  ಏಶ್ಯನ್‌ ಗೇಮ್ಸ್‌ ವೇಳೆ ಸರ್ದಾರ್‌ ಅವರ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು.

ಚಂಡೀಗಢದಲ್ಲಿರುವ ನನ್ನ ಕುಟುಂಬ ಸದಸ್ಯರ, ಹಾಕಿ ಇಂಡಿಯಾ ಮತ್ತು ಸ್ನೇಹಿತರ ಸಲಹೆ ಪಡೆದು ನಿವೃತ್ತಿಯಾಗುವ ನಿರ್ಧಾರ ತಾಳಿದ್ದೇನೆ. ಹಾಕಿ ಹೊರತಾದ ಜೀವನದ ಬಗ್ಗೆ ಅಲೋಚನೆ ಮಾಡಲು ಇದು ಸರಿಯಾದ ಸಮಯವೆಂದು ಭಾವಿಸಿದ್ದೇನೆ ಎಂದು ಸರ್ದಾರ್‌ ತಿಳಿಸಿದರು.

ಆಶ್ಚರ್ಯವೆಂಬಂತೆ ಏಶ್ಯನ್‌ ಗೇಮ್ಸ್‌ ವೇಳೆ ಸರ್ದಾರ್‌ ನನ್ನಲ್ಲಿ ಇನ್ನೂ ಹಾಕಿ ಉಳಿದುಕೊಂಡಿದೆ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು.ಆದರೆ ಬುಧವಾರ ಹಾಕಿ ಇಂಡಿಯಾ ರಾಷ್ಟ್ರೀಯ ಶಿಬಿರಕ್ಕೆ ಪ್ರಕಟಿಸಿದ 25 ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸರ್ದಾರ್‌ ಅವರ ಹೆಸರು ಇಲ್ಲದ ಕಾರಣ ಅವರು ಬಲವಂತವಾಗಿ ನಿವೃತ್ತಿ ಘೋಷಿಸಿದ್ದಾರೆಂದು ಹೇಳಲಾಗುತ್ತಿದೆ.

ಶಿಬಿರಕ್ಕೆ ನಿಮ್ಮನ್ನು ಕೈಬಿಡಲಾಗಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿದ ಅವರು ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ನಿವೃತ್ತಿ ಪ್ರಕಟಿಸುವೆ ಎಂದಿದ್ದಾರೆ.

Advertisement

2006ರಲ್ಲಿ ಪಾದಾರ್ಪಣೆ
2006ರಲ್ಲಿ ಪಾಕಿಸ್ಥಾನ ವಿರುದ್ಧ ಆಡುವ ಮೂಲಕ ಸೀನಿಯರ ತಂಡಕ್ಕೆ ಪಾದಾರ್ಪಣೆಗೈದ ಬಳಿಕ ಸರ್ದಾರ್‌ ಮಿಡ್‌ಫಿàಲ್ಡ್‌ನಲ್ಲಿ ತಂಡದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದರು. 32ರ ಹರೆಯದ ಅವರು ಭಾರತ ಪರ 350 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 2008ರಿಂದ 2016ರ ನಡುವೆ ಎಂಟು ವರ್ಷ ರಾಷ್ಟ್ರೀಯ ತಂಡದ ನಾಯಕರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಆಬಳಿಕ ನಾಯಕನ ಜವಾಬ್ದಾರಿಯನ್ನು ಪಿಆರ್‌ ಶ್ರೀಜೇಶ್‌ಗೆ ವಹಿಸಿದ್ದರು.

ಅತೀ ಕಿರಿಯ ನಾಯಕ
2008ರಲ್ಲಿ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸುವ ಮೂಲಕ ಅವರು ಅತೀ ಕಿರಿಯ ನಾಯಕ ಎಂದೆನಿಸಿಕೊಂಡಿದ್ದರು. 2012ರಲ್ಲಿ ಅರ್ಜುನ ಮತ್ತು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದರು. ಎರಡು ಒಲಿಂಪಿಕ್ಸ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಿಂದ ಕೈಬಿಟ್ಟ ಬಳಿಕ ಸರ್ದಾರ್‌ ಕಠಿನ ಅಭ್ಯಾಸ ನಡೆಸಿ ಚಾಂಪಿಯನ್ಸ್‌ ಟ್ರೋಫಿ ವೇಳೆ ಮರಳಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದರು. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಬೆಳ್ಳಿಯ ಪದಕ ಗೆಲ್ಲಲು ತಮ್ಮ ಕೊಡುಗೆ ಸಲ್ಲಿಸಿದ್ದರು.

ನಿವೃತ್ತಿಯಾಗುವ ನಿರ್ಧಾರವನ್ನು ಸರ್ದಾರ್‌ ಈಗಾಗಲೇ ಮುಖ್ಯ ಕೋಚ್‌ ಹರೇಂದ್ರ ಸಿಂಗ್‌ ಅವರಿಗೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಅವರು ದೇಶೀಯ ಹಾಕಿ ಸ್ಪರ್ಧೆಗಳಲ್ಲಿ ಆಡಲಿದ್ದಾರೆ.

“ಹೌದು, ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿಯಾಗುತ್ತಿದ್ದೇನೆ. ನನ್ನ ಬಾಳ್ವೆಯಲ್ಲಿ ಸಾಕಷ್ಟು ಹಾಕಿ ಆಟ ಆಡಿದ್ದೇನೆ. 12 ವರ್ಷ ಸುದೀರ್ಘ‌ವಾದ ಸಮಯ. ಭವಿಷ್ಯದ ತಾರೆಯರು ಹಾಕಿ ಆಟವಾಡಲು ಸಮಯ ಬಂದಿದೆ’.
– ಸರ್ದಾರ್‌ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next