ದಾವಣಗೆರೆ: ಕೆಲವಾರು ಕಾಣದ ಕೈಗಳು ತಮಗೆ ಬಿ-ಫಾರಂ ತಪ್ಪಿಸಿದವು ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ಎಸ್. ರಾಮಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದಲ್ಲಿದ್ದರೂ 600 ಕೋಟಿಗೂ ಅಧಿಕ ಅನುದಾನ ತಂದು ಹಲವಾರು ಅಭಿವೃದ್ಧಿ ಕೆಲಸ ಮಾಡಿಸಿರುವೆ. ಈಗಲೂ 70-80 ಕೋಟಿಯ ಕೆಲಸ ನಡೆಯುತ್ತಿವೆ. ಅಭಿವೃದ್ಧಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಸ್ವಾಮೀಜಿವರಿಂದ ಹಿಡಿದು ಹೈಕಮಾಂಡ್ ಜೊತೆಗೆ ಎಲ್ಲರೊಂದಿಗೆ ಚೆನ್ನಾಗಿದ್ದೆ. ಆದರೂ, ಕೆಲವಾರು ಕಾಣದ ಕೈಗಳು ನನಗೆ ಬಿ-ಫಾರಂ ತಪ್ಪಿಸಿದವು ಎಂದರು.
ರಾಮಪ್ಪ ಗೆದ್ದೇ ಗೆಲ್ಲುತ್ತಾರೆ ಎಂದು ಐದು ಸರ್ವೇಗಳಲ್ಲೂ ಹೇಳಲಾಗಿತ್ತು. ನಾನೇ ಸ್ಪರ್ಧಿಸಿದ್ದರೆ ಖಂಡಿತವಾಗಿಯೂ 25 ಸಾವಿರದಷ್ಟು ಮತಗಳಲ್ಲಿ ಗೆದ್ದೇ ಗೆಲ್ಲುತ್ತಿದ್ದೆ. ಆದರೆ, ಕೆಲವರು ಬಿ-ಫಾರಂ ತಪ್ಪಿಸಿದರು. ಪಂಚಮಸಾಲಿ, ನಮ್ಮ ಸಮಾಜ, ವಾಲ್ಮೀಕಿ ಸ್ವಾಮೀಜಿಯವರು ಪತ್ರ ಬರೆದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಪತ್ರ ಬರೆದಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ನಾನು ಎಲ್ಲ ಸ್ವಾಮೀಜಿಗಳೊಂದಿಗೆ ಚೆನ್ನಾಗಿ ಇದ್ದೇನೆ. ಆದರೂ, ಕೆಲವರು ಬಿ-ಫಾರಂ ತಪ್ಪಿಸಿದರು. ಅವರು ಯಾರು ಎಂಬುದು ನನಗಿಂತಲೂ ಜನರಿಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ನನಗೆ ವಿಧಾನ ಪರಿಷತ್ತು ಸದಸ್ಯತ್ವ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಇತರೆ ನಾಯಕರಿಗೆ ಮನವಿ ಸಲ್ಲಿಸಿದ್ದೇನೆ. ರಾಮಪ್ಪನಿಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಬೇಕು ಎಂದು ಅನೇಕರು ಹೇಳಿದ್ದಾರೆ. ನಾನು ಎಂಎಲ್‌ಸಿ ಸ್ಥಾನವನ್ನೇ ಕೊಡಬೇಕು ಎಂದು ಕೇಳಿದ್ದೇನೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೂ ಹೈಕಮಾಂಡ್ ತೀರ್ಮಾನವನ್ನ ಒಪ್ಪುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಂದಿಗಾವಿ ಶ್ರೀನಿವಾಸ್ ಅವರು ಸಹ ಎಂಎಲ್‌ಸಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರು ಬೇಕಾದರೂ ಮನವಿ ಮಾಡಿಕೊಳ್ಳಬಹುದು. ಯಾರಿಗೂ ಕೊಡಬೇಡಿ ಎನ್ನುವುದಕ್ಕೆ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.