Advertisement

ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧೆ ಪ್ರಯತ್ನ: ತೀನ ಘೋಷಣೆ

05:04 PM Feb 11, 2022 | Suhan S |

ಸಾಗರ: ಶಾಸಕ ಸ್ಥಾನ ಯಾರ ಸ್ವತ್ತಲ್ಲ. ನಾನು ಮುಂದಿನ ವಿಧಾನಸಭಾ ಚುನಾವಣೆಗೆ ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದು ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಘೋಷಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಾಸಕ ಹರತಾಳು ಹಾಲಪ್ಪ ಅವರು ನನಗೆ ಒಂದು ಗುಂಟೆ ಭೂಮಿ ಇಲ್ಲ ಎಂದು ಟೀಕೆ ಮಾಡಿ, ಭೂಮಿ ಇಲ್ಲದವರು ರೈತರ ಪರವಾಗಿ ಮಾತನಾಡುತ್ತಾರೆ ಎಂದು ಹೇಳಿರುವುದು ಖಂಡನೀಯ. ಭೂಮಿ ಇಲ್ಲದೆ ಇದ್ದರೂ ರೈತ ಪರವಾಗಿ ಹೋರಾಟ ಮಾಡಬಾರದು ಎಂಬ ಕಾನೂನು ಇಲ್ಲ. ನಾನು ಪ್ರೊ. ನಂಜುಂಡಸ್ವಾಮಿ, ಸುಂದರೇಶ್, ರುದ್ರೇಶ್ ಇನ್ನಿತರರ ರೈತ ಹೋರಾಟದಿಂದ ಪ್ರೇರಣೆಗೊಂಡು ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ರೈತಪರ ಹೋರಾಟ ಮಾಡಿಕೊಂಡು ಬಂದವನು. ರೈತರ ಸಮಸ್ಯೆ ಏನು ಎನ್ನುವುದು ಶಾಸಕ ಹಾಲಪ್ಪ ಅವರಿಗಿಂತ ನನಗೆ ಚನ್ನಾಗಿ ಗೊತ್ತು ಎಂದು ಹೇಳಿದರು.

ಶಾಸಕರು ತಾವು ಶರಾವತಿ ಮುಳುಗಡೆ ಕುಟುಂಬದವರು ಎಂದು ಪದೇಪದೇ ಹೇಳುತ್ತಾರೆ. ಆದರೆ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅವರ ಪ್ರಯತ್ನ ಏನು ಎಂದು ಪ್ರಶ್ನಿಸಿದ ಅವರು, ಸೊರಬ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಹಾಲಪ್ಪ ಅವರು ಕೆರೆಹಳ್ಳಿ, ತಾಳಗುಪ್ಪದಲ್ಲಿ ೩೨ಕ್ಕೂ ಹೆಚ್ಚು ರೈತರನ್ನು ಒಕ್ಕಲೆಬ್ಬಿಸಿದ್ದಾರೆ. ಇದನ್ನು ವಿರೋಧ ಮಾಡಿದ ೫೦ಕ್ಕೂ ಹೆಚ್ಚು ರೈತರನ್ನು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಕೂಡಿಹಾಕಿದ್ದರು. ಈ ಸಂದರ್ಭದಲ್ಲಿ ಕಾಗೋಡು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರೈತಪರ ಹೋರಾಟ ನಡೆಸಲಾಗಿತ್ತು. ಎಣ್ಣೆಕೊಪ್ಪದ ಭೋವಿ ಜನಾಂಗದ ರೈತರನ್ನು ಒಕ್ಕೆಲಬ್ಬಿಸುವ ಸಂದರ್ಭದಲ್ಲಿ ಸಹ ನಾವು ಹೋರಾಟ ಮಾಡಿದ್ದೇನೆ ಎಂದರು.

ಶಾಸಕರು ಜನರನ್ನು ಗಣಪತಿ ಕೆರೆ ಪಕ್ಕದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಿ ಗಣಪತಿ ಕೆರೆ ಅಂಗಳವನ್ನು ಒತ್ತುವರಿ ಮಾಡಿದ್ದಾರೆ. ಕೆರೆ ಒತ್ತುವರಿಗೆ ಸಂಬಂಧಪಟ್ಟಂತೆ ಮೂರು ಬಾರಿ ಸರ್ವೆ ಕಾರ್ಯ ನಡೆದಿದ್ದು, ಒತ್ತುವರಿದಾರರ ಪಟ್ಟಿಯಲ್ಲಿ ಶಾಸಕರ ಹೆಸರು ಸಹ ಇದೆ. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವೈಫಲ್ಯ ಹೊಂದಿರುವ ಶಾಸಕರು ಸಣ್ಣಪುಟ್ಟ ಕಚೇರಿ ಎದುರು ಪ್ರತಿಭಟನೆ ನಡೆಸಿ ತಾವು ಅಸಮರ್ಥರು ಎಂದು ಸಾಬೀತುಪಡಿಸುತ್ತಿದ್ದಾರೆ. ಅದರ ಬದಲು ವಿಧಾನಸೌಧದಲ್ಲಿ ಧರಣಿ ಕುಳಿತುಕೊಳ್ಳಲಿ ಎಂದು ಸವಾಲು ಹಾಕಿದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ, ಅರಣ್ಯಹಕ್ಕು ಸಾಗುವಳಿದಾರರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಕೊಡಿಸುವಲ್ಲಿ ವಿಫಲವಾಗಿರುವ ಶಾಸಕರು ಹೇಗೆ ರೈತಪರವಾಗುತ್ತಾರೋ ನನಗೆ ಗೊತ್ತಿಲ್ಲ. ಅವರು ಮೂರು ಬಾರಿ ಶಾಸಕರಾಗಿದ್ದಾಗಲೂ ರೈತ ವಿರೋಧಿಯಾಗಿಯೇ ನಡೆದುಕೊಂಡಿದ್ದು, ನನ್ನನ್ನು ರೈತನಲ್ಲ ಎಂದು ಹೇಳುವ ಮೂಲಕ ಸಣ್ಣತನ ಪ್ರದರ್ಶನಕ್ಕೆ ಇಳಿದಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಆಣೆಪ್ರಮಾಣ ಮಾಡುವ ಬದಲು ಸಾಗರದ ಮಾರಿಕಾಂಬಾ ದೇವಿ ಎದುರು ಜನರ ಎದುರು ತಾವು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಹಾಲಪ್ಪ ಅವರು ಸೋಲಿನ ಭೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

Advertisement

ಗೋಷ್ಠಿಯಲ್ಲಿ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ, ಪ್ರಮುಖರಾದ ಮಹ್ಮದ್ ಖಾಸಿಂ, ವೆಂಕಟೇಶ್, ವಸಂತ್ ಶೇಟ್, ಸುಭಾಷ್ ಎಲ್.ವಿ., ಪಾರ್ವತಿ ಬೇಸೂರು, ಇಂದೂಮತಿ, ದೀಪಾ ಕೆ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next