ಭಾರತ-ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ನಡೆದ ಓಲ್ಡ್ ಟ್ರಾಫರ್ಡ್ ಅಂಕಣಕ್ಕೆ ಮಾಜಿ ಕ್ರಿಕೆಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.
ಇದು ಒಳ್ಳೆಯ ಅಂಕಣವಾಗಿ ಕಾಣುತ್ತಿಲ್ಲ. ಬಹಳ ನಿಧಾನಗತಿಯಲ್ಲಿತ್ತು ಮತ್ತು ಸ್ವಲ್ಪಮಟ್ಟಿಗೆ ತಿರುವು ತೆಗೆದುಕೊಳ್ಳುತ್ತಿತ್ತು. 240 ರನ್ ಇಲ್ಲಿನ ದೊಡ್ಡ ಮೊತ್ತವಾಗಲಿದೆ ಎಂದು ಆಸ್ಟ್ರೇಲಿಯದ ಮಾರ್ಕ್ ವಾ ಟ್ವೀಟ್ ಮಾಡಿದ್ದರು.
ವಿಶ್ವಕಪ್ ಪಿಚ್‌ಗಳು ಹೊಲಸಿನಿಂದ ಕೂಡಿವೆ ಎಂದು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಮಾರ್ಕ್ ಬುಚರ್ ಟೀಕಿಸಿದ್ದಾರೆ. ಭಾರೀ ಮೊತ್ತದ ಹಣ ತೆತ್ತು ಈ ಕಳಪೆ ಗುಣಮಟ್ಟದ ಪಿಚ್‌ನಲ್ಲಿ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಲ್ಲಿ ಕ್ಷಮೆ ಕೇಳಬೇಕು ಎಂದು ಇಂಗ್ಲೆಂಡಿನ ಗ್ರೇಮ್ ಫ್ಲವರ್ ಹೇಳಿದ್ದಾರೆ.
ಈ ವಿಶ್ವಕಪ್‌ನಲ್ಲಿ ಪಿಚ್ ಗಳಿಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಐಸಿಸಿಯೇ ಆದೇಶ ನೀಡಿರಬಹುದೇ ಎಂಬುದು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಪಾಲ್ ನ್ಯೂಮನ್ ಪ್ರಶ್ನೆ.
ಐಸಿಸಿ ನಿರಾಕರಣೆ: ನಿಧಾನಗತಿಯ ಪಿಚ್ ಸಿದ್ಧಪಡಿಸುವಂತೆ ಮೈದಾನದ ಸಿಬ್ಬಂದಿಗೆ ಐಸಿಸಿ ಆದೇಶ ನೀಡಿದೆ ಎಂಬ ಆರೋಪವನ್ನು ನಿರಾಕರಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ನಾವು ಕ್ರೀಡಾಸ್ಫೂರ್ತಿಯ ಪಿಚ್ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದೆವು ಎಂದಿದೆ.